ಬೆಂಗಳೂರು : ಸುಮಾರು 15 ಸಾವಿರಕ್ಕೂ ಹೆಚ್ಚು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹೊರಡಿಸಿದ್ದ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ಸೋಮವಾರ ರದ್ದುಪಡಿಸಿ ಆದೇಶಿಸಿದೆ. ಅಲ್ಲದೆ, ಅಭ್ಯರ್ಥಿಗಳ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿ ಆದೇಶಿಸಿದೆ.
ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಕೈಬಿಟ್ಟಿದ್ದ ಕ್ರಮವನ್ನು ಪ್ರಶ್ನಿಸಿ ಅಕ್ಷತಾ ಚೌಗುಲೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದ್ದು, ಅರ್ಜಿಯನ್ನು ಪುರಸ್ಕರಿಸಲಾಗಿದೆ.
ಪದವೀಧರರ ಪ್ರಾರ್ಥಮಿಕ ಶಾಲಾ ಶಿಕ್ಷಕರ(6-8 ತರಗತಿ) ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಫೆಬ್ರವರಿ 22ರಂದು ಅಧಿಸೂಚನೆ ಹೊರಡಿಸಿತ್ತು. ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸಿದ್ದರು. ಲಿಖಿತ ಪರೀಕ್ಷೆಗೆ ಹಾಜರಾಗಿ ಉತ್ತಮ ರ‍್ಯಾಂಕ್ ಕೂಡ ಗಳಿಸಿದ್ದರು. ಅಲ್ಲದೆ, 1:2 ದಾಖಲೆಗಳ ಪರಿಶೀಲನೆಗೆಗಾಗಿ ಅರ್ಜಿದಾರರು ಅರ್ಹರಾಗಿದ್ದರು. ಬಳಿಕ ದಾಖಲೆ ಪರಿಶೀಲಿಸಿದ ಇಲಾಖೆಯು ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ. ಆದರೆ, 2022ರ ನವೆಂಬರ್ 18ರಂದು ಹೊರಡಿಸಿದ್ದ 1:1 ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಅರ್ಜಿ ಸಲ್ಲಿಸಿರುವ ಯಾವುದೇ ಅಭ್ಯರ್ಥಿ ಆಯ್ಕೆಯಾಗಿರಲಿಲ್ಲ. ಆದರೆ, ಅರ್ಜಿದಾರರಿಗಿಂತಲೂ ಕಡಿಮೆ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದನ್ನು ಕಂಡು ಅರ್ಜಿದಾರರು ಗಾಬರಿಗೊಳ್ಳುವಂತಾಗಿತ್ತು.
ಈ ಬಗ್ಗೆ ಪರಿಶೀಲಿಸಿದಾಗಿ ಅರ್ಜಿದಾರರು ತಮ್ಮ ಪತಿ, ಪತ್ನಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಿರಲಿಲ್ಲ. ಬದಲಾಗಿ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿತ್ತು. ಇದೇ ಕಾರಣದಿಂದ ಎಲ್ಲ ಅರ್ಜಿದಾರರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿರುವುದಾಗಿ ತಿಳಿಸಿದರು.
ಆದರೆ, ಅಧಿಸೂಚನೆ ಸಲ್ಲಿಸಿದ ಸಂದರ್ಭದಲ್ಲಿ ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವನ್ನು ಮಾಡಿರಲಿಲ್ಲ. ಹೀಗಾಗಿ ಅರ್ಜಿದಾರನ್ನು ಪರಿಗಣಿಸದಿರುವುದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ನೀಡಿರುವ ದೃಢೀಕರಣ ಪತ್ರ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದು ಮಾಡಬೇಕು. ಜೊತೆಗೆ, ಪತಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕೋರುವುದು ಕಾನೂನಿಗೆ ವಿರುದ್ಧವಾಗಿದೆ. ಇದನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.