ಕರ್ನಾಟಕ

karnataka

ETV Bharat / state

ಹಂಪಿ ದೇವಾಲಯ ಬಳಿಯ ಭೂಸ್ವಾಧೀನ ರದ್ದುಪಡಿಸಿದ ಹೈಕೋರ್ಟ್

ಹಂಪಿಯಲ್ಲಿರುವ ಉಗ್ರನರಸಿಂಹ ಮತ್ತು ಬಡವಿಲಿಂಗ ದೇವಾಲಯಗಳ ಬಳಿಯ ಭೂಸ್ವಾಧೀನ ಪಡಿಸಿಕೊಂಡಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್​ ರದ್ದುಗೊಳಿಸಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Nov 2, 2023, 10:56 PM IST

ಬೆಂಗಳೂರು :ಹಂಪಿಯಲ್ಲಿರುವ ಉಗ್ರ ನರಸಿಂಹ ಮತ್ತು ಬಡವಿಲಿಂಗ ದೇವಾಲಯಗಳ ಸಂರಕ್ಷಿತ ಸ್ಮಾರಕಗಳಿರುವ ಜಾಗದಲ್ಲಿ ಮೂಲಸೌಕರ್ಯ ಸುಧಾರಣೆಗೆ ಸುಮಾರು ಏಳು ಎಕರೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಹೊಸಪೇಟೆ ತಾಲೂಕಿನ ಕೃಷ್ಣಾಪುರ ಮತ್ತು ಕಮಲಾಪುರ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದನ್ನು ಪ್ರಶ್ನಿಸಿ, 2007ರಲ್ಲಿ ನಿಡಶೇಷಿ ವೀರಣ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಧಾರವಾಡ ನ್ಯಾಯಪೀಠ, ಭೂಸ್ವಾಧೀನ ಮಾಡಿಕೊಂಡು 2006ರ ಏ. 5 ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.

ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿ ಬಡ ರೈತರ ಜೀವನಾಡಿಯಾಗಿದೆ. ಈ ಪ್ರಕರಣದಲ್ಲಿ ಭೂಸ್ವಾಧೀನಕ್ಕೆ ಯಾವುದೇ ನೈತಿಕ ಕಾರಣಗಳಿಲ್ಲ. ರಾಷ್ಟ್ರೀಯ ಸ್ಮಾರಕಗಳ ಸುಂದರೀಕರಣಕ್ಕಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುವುದರಿಂದ ಅರ್ಜಿದಾರರು ತಮ್ಮ ಆಕ್ಷೇಪಣೆಯನ್ನು ಸಲ್ಲಿಸುವ ಮೂಲಕ ವಿಚಾರಣೆಗೆ ಅರ್ಹರಾಗಿರುತ್ತಾರೆ. ಅದಕ್ಕಾಗಿ ತುರ್ತು ಷರತ್ತು ವಿಧಿಸಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಭೂ ಸ್ವಾಧೀನ ಕಾಯಿದೆ 1894ರ ಸೆಕ್ಷನ್ 5ಎ ಅನ್ವಯ ಆಕ್ಷೇಪಣೆಗಳ ವಿಚಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಅದನ್ನು ರದ್ದುಪಡಿಸಿ ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ತುರ್ತು ನಿಬಂಧನೆಯನ್ನು ಅನ್ವಯಿಸುವ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವು ದುರುದ್ದೇಶದಿಂದ ಕೂಡಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ತುರ್ತು ಷರತ್ತುಗಳಂತಹ ಕಾನೂನು ವ್ಯಾಪ್ತಿಯನ್ನು ವಿಧಿಸುವಾಗ ಅಧಿಕಾರಿಗಳು ಕಾನೂನಿನ ಇತರೆ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಬದ್ಧವಾಗಿರಬೇಕು. ಪ್ರಸ್ತುತ ಪ್ರಕರಣದಲ್ಲಿ, ತುರ್ತು ಷರತ್ತನ್ನು ಅನ್ವಯ ಮಾಡಿರುವ ಕುರಿತು ಪುಷ್ಟೀಕರಿಸುವುದಕ್ಕೆ ದಾಖಲೆಗಳಿಲ್ಲ ಎಂದು ಪೀಠ ತಿಳಿಸಿದೆ. ಭೂಸ್ವಾಧೀನ ಸಂಬಂಧ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು, ಈ ಭೂಸ್ವಾಧೀನ ಕಾಯಿದೆ 1894 ರ ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ಸರ್ಕಾರಕ್ಕೆ ನೀಡಲಾದ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಚಲಾಯಿಸಲಾಗಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು ?: ಕೃಷ್ಣಾಪುರ ಮತ್ತು ಕಮಲಾಪುರ ಗ್ರಾಮಗಳಲ್ಲಿನ ವಿವಿಧ ಸರ್ವೇ ನಂಬರ್​ಗಳಲ್ಲಿ ರೈತರಿಗೆ ಸೇರಿದ ಭೂಮಿಯನ್ನು ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯಿದೆ 1894ರಡಿ ಸ್ವಾಧೀನಪಡಿಸಿಕೊಂಡಿತ್ತು. ದೇವಾಲಯಗಳಿಗೆ ಪ್ರವೇಶವನ್ನು ದೊರಕಿಸಿಕೊಡಲು ಈ ಸ್ವಾಧೀನ ಅತ್ಯಗತ್ಯ ಎಂದು ಸರ್ಕಾರ ತಿಳಿಸಿತ್ತು.

ಅರ್ಜಿದಾರರು ತಾವು ಆ ಕೃಷಿ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಆದರೆ ಸರ್ಕಾರ ಏಕಪಕ್ಷೀಯವಾಗಿ ಸ್ವಾಧೀನ ನಿರ್ಧಾರ ಕೈಗೊಂಡಿದೆ. ಕನಿಷ್ಠ ತಮ್ಮ ಆಕ್ಷೇಪಣೆಗಳನ್ನೂ ಸಹ ಕೇಳಿಲ್ಲ. ಯಾವುದೇ ತುರ್ತು ಇಲ್ಲದಿದ್ದರೂ ತುರ್ತು ಸಂದರ್ಭ ಎಂದು ಹೇಳಿ ನಿಯಮದ ಪ್ರಕಾರ ಆಕ್ಷೇಪಣೆಗಳಿಗೂ ಅವಕಾಶ ನೀಡದೆ ಕಾನೂನು ಬಾಹಿರ ಕ್ರಮ ಕೈಗೊಂಡಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:2026ರ ಜನಸಂಖ್ಯೆಗೆ ಅನುಗುಣವಾಗಿ ಶೇ.5ರಷ್ಟು ಶೌಚಾಲಯ: ಹೈಕೋರ್ಟ್​ಗೆ ಸರ್ಕಾರ ಮಾಹಿತಿ

ABOUT THE AUTHOR

...view details