ಬೆಂಗಳೂರು: ಸಾವಿಗೂ ಮುನ್ನ ಎರಡು ತಿಂಗಳಿನಿಂದ ಸತತವಾಗಿ ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾಗಿದ್ದರೂ, ಕಾರ್ಯದೊತ್ತಡ ಮತ್ತು ಆಯಾಸದಿಂದ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಬಿಎಂಟಿಸಿ) ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿಸಿ ಅವರ ತಾಯಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ನೀಡಿದೆ.
ಈ ಸಂಬಂಧ ವಿಚಾರಣಾ ನ್ಯಾಯಾಲಯದ ಮುಂದೆ ಬಿಎಂಟಿಸಿ ಇಟ್ಟಿದ್ದ ಠೇವಣಿಯನ್ನು ಹಿಂದಿರುಗಿಸಲು ಸೂಚನೆ ನೀಡಿದೆ. ಪರಿಹಾರ ನೀಡುವಂತೆ ಘೋಷಣೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಎಂಟಿಸಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ ಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿತು.
ಮೃತನ ತಾಯಿ, ತನ್ನ ಪುತ್ರ ಉದ್ಯೋಗ ನಿರ್ವಹಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಕ್ಲೇಮು ಅರ್ಜಿಯಲ್ಲಿ ತಿಳಿಸಿಲ್ಲ. ಚಾಲಕ ಮೃತಪಡುವ ಮುನ್ನ ಎರಡು ತಿಂಗಳಿಂದಲೂ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿದ್ದಾರೆ. ಸಾಕ್ಷ್ಯಾಧಾರ ಲಭ್ಯವಿದೆ. ಹಾಗಾಗಿ, ಉದ್ಯೋಗ ನಿರ್ವಹಣೆ ವೇಳೆ ಆತ ಸಾವನ್ನಪ್ಪಿದ್ದಾರೆ ಎಂಬುದಾಗಿ ಪರಿಗಣಿಸಲಾಗದು. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.
ಬೋಜರಾಜ 2008 ರಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಪರಿಹಾರ ಕೋರಿ 2016 ರಲ್ಲಿ ಅಂದರೆ 8 ವರ್ಷ ಕಾಲ ವಿಳಂಬವಾಗಿ ಕ್ಲೇಮು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರೆಯು 2010 ರಲ್ಲಿ ಅಂದಿನ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಅದರಲ್ಲೂ ಸಹ ಪುತ್ರ ಉದ್ಯೋಗ ನಿರ್ವಹಣೆ ವೇಳೆ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಿರಲಿಲ್ಲ. ಕ್ಲೇಮು ಅರ್ಜಿಯಲ್ಲೂ ಈ ವಿಚಾರವನ್ನು ತಿಳಿಸಿರಲಿಲ್ಲ ಎಂದು ಅಭಿಪ್ರಾಯಪಟ್ಟಿತು.