ಬೆಂಗಳೂರು :ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವೇಳೆ ರವಿಕುಮಾರ್ ಗಾಣಿಗ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡದ ಹಿನ್ನೆಲೆ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದ್ದ ಆರೋಪದಡಿ 12 ಮಂದಿ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಹೆಚ್ ಪಿ ವಿಜಯ್ ಕುಮಾರ್ ಹಾಗೂ ಇತರೆ 11 ಮಂದಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾ.ಹೆಚ್.ಪಿ.ಸಂದೇಶ ಅವರಿದ್ದ ಪೀಠ ಈ ಆದೇಶ ಮಾಡಿದೆ. ಪೀಠ ತನ್ನ ಆದೇಶದಲ್ಲಿ, ಅರ್ಜಿದಾರರ ವಿರುದ್ಧದ ಆರೋಪಗಳ ಕುರಿತು ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.
ಮೊದಲ ಬಾರಿಗೆ ವೈಯಕ್ತಿಕ ಬಾಂಡ್ ಪಡೆದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಹಾಗಿದ್ದೂ, ಎರಡನೇ ಬಾರಿ ಎಫ್‌ಐಆರ್ ದಾಖಲಿಸಿರುವುದು ನಿಯಮಬಾಹಿರ ಕ್ರಮ.
ಪ್ರಕರಣದಲ್ಲಿ ಕಾಂಗ್ರೆಸ್ ಕಚೇರಿಗೆ ಸಂಬಂಧಿಸಿದವರನ್ನು ಸಾಕ್ಷಿಯಾಗಿ ಪರಿಗಣಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಪೊಲೀಸರು ಸಲ್ಲಿಸಿದ್ದ ದೋಷಾರೋಪಣೆ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ಸಿ.ಎನ್.ರಾಜು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ರವಿಕುಮಾರ್ ಗಾಣಿಗ ಅವರಿಗೆ ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡದಿರುವುದನ್ನು ಖಂಡಿಸಿ, ಅರ್ಜಿದಾರರು 2018ರ ಏ.16ರಂದು ಬೆಳಗ್ಗೆ 11.30ರಿಂದ 12.40ರ ಮಧ್ಯೆ ಮಂಡ್ಯದ ಸಂಜಯ ವೃತ್ತದಿಂದ ಬಂಡಿಗೌಡ ಬಡಾವಣೆಯ ಕಾಂಗ್ರೆಸ್ ಪಕ್ಷದ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಮಂಡ್ಯ ಪೊಲೀಸರು, ಅರ್ಜಿದಾರರು ಅಕ್ರಮ ಕೂಟ ಸೇರಿ ಕಾಂಗ್ರೆಸ್ ಕಚೇರಿ ಅತಿಕ್ರಮಿಸಿ, ಅಲ್ಲಿದ್ದ ಚೇರ್‌ಗಳನ್ನು ನಾಶ ಮಾಡಿದ್ದಾರೆಂದು ಆರೋಪಿಸಿದ್ದರು. ಹಾಗೆಯೇ ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.