ಬೆಂಗಳೂರು :ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು 2023 ರ ಆ. 10ರಂದು ಬರೆದಿರುವ ಟಿಪ್ಪಣಿ ಆಧರಿಸಿ ಕೈಗೊಳ್ಳಲಾಗಿದ್ದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ. ಅನೀಸ್ ಫಾತಿಮಾ ಎಂಬುವರು ಸೇರಿದಂತೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ-ಕಿರಿಯ ಆರೋಗ್ಯ ಪರಿವೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜಾ ಸಹಾಯಕರು, ಸಹಾಯಕ ಇಂಜಿನಿಯರ್ ಹುದ್ದೆಗಳ 17 ಮಂದಿ ಅಧಿಕಾರಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. ಉಪ ಮುಖ್ಯಮಂತ್ರಿಯರ ಆ. 10ರ ಟಿಪ್ಪಣಿ ಆಧರಿಸಿ ಯಾವುದೇ ವರ್ಗಾವಣೆ ಅಥವಾ ನಿಯೋಜನೆ ಕೈಗೊಳ್ಳುವಂತಿಲ್ಲ ಎಂದು ತಡೆ ನೀಡಿದೆ. ಅಲ್ಲದೆ, ಪ್ರಕರಣದಲ್ಲಿನ ಎಲ್ಲ ಪ್ರತಿವಾದಿಗಳಿಗೆ ನೊಟೀಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.