ಬೆಂಗಳೂರು: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಎಂಆರ್‌ಐ ಯಂತ್ರ ಅಳವಡಿಸಲು ವಿಳಂಬ ಧೋರಣೆ ಮಾಡಿದ ಕಾರಣಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ವೇತನ ತಡೆ ಹಿಡಿಯಲು ಆದೇಶಿಸಿ, ಕೆಲ ಹೊತ್ತಿನ ಬಳಿಕ ಹಿಂಪಡೆದ ಘಟನೆ ಇಂದು ಹೈಕೋರ್ಟ್ನಲ್ಲಿ ನಡೆಯಿತು.
ಡಿಮ್ಹಾನ್ಸ್"ಗೆ ಮೂಲ ಸೌಕರ್ಯ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತಾವಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು, ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ನ್ಯಾಯಾಲಯದ ಹಿಂದಿನ ನಿರ್ದೇಶನದ ಅನ್ವಯ ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಎಂಆರ್‌ಐ ಮಷಿನ್ ಅಳವಡಿಸಿ, ಅದು ಕಾರ್ಯಾರಂಭ ಮಾಡುವವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ನವೀನ್ ರಾಜ್ ಅವರಿಗೆ ವೇತನ ಬಿಡುಗಡೆ ಮಾಡಬಾರದು ಎಂದು ಸರ್ಕಾರಕ್ಕೆ ಆದೇಶಿಸಿತು.
ಮಧ್ಯಾಹ್ನದ ಬಳಿಕ ಸರ್ಕಾರಿ ವಕೀಲರ ಮನವಿ ಮೇರೆಗೆ ಆದೇಶ ಹಿಂಪಡೆದ ಪೀಠ, ಆಸ್ಪತ್ರೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಶೀಘ್ರವಾಗಿ ಕಲ್ಪಿಸುವಂತೆ ತಾಕೀತು ಮಾಡಿ, ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿತು. ಅರ್ಜಿಯ ಹಿಂದಿನ ವಿಚಾರಣೆ ವೇಳೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಎಂಆರ್‌ಐ ಯಂತ್ರವನ್ನು ಶೀಘ್ರ ಅಳವಡಿಸಬೇಕು. ಆಸ್ಪತ್ರೆಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಉನ್ನತೀಕರಿಸಿದ ಆಸ್ಪತ್ರೆಯು ಏಪ್ರಿಲ್ 1ರಿಂದ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕು" ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.
ಅಲ್ಲದೇ, ಡಿಮಾನ್ಸ್ ಉನ್ನತೀಕರಿಸಲು ಸರ್ಕಾರಕ್ಕೆ ಹಲವು ತಿಂಗಳುಗಳಿಂದ ಸಮಯ ನೀಡುತ್ತಲೇ ಇದ್ದೇವೆ. ಆದರೆ, ಸರ್ಕಾರ ಮಾತ್ರ ಈ ವಿಚಾರದಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಈ ಸರ್ಕಾರ ಕೆಲಸ ಮಾಡುವಂತೆ ಮಾಡಲು ಏನು ಮಾಡಬೇಕು ಎಂದು ಪ್ರಶ್ನಿಸಿತ್ತು. ಹಾಗೆಯೇ, ನಿಮಗೆ ಆಸ್ಪತ್ರೆ ಬೇಡವಾಗಿದ್ದರೆ ಅದನ್ನು ಮುಚ್ಚಿ ಬಿಡಿ. ಆಗ ಇಂತಹ ಸಮಸ್ಯೆಗಳೇ ಇರುವುದಿಲ್ಲ ಸರ್ಕಾರವನ್ನು ಕಟುವಾಗಿ ಟೀಕಿಸಿತ್ತು.