ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿ ಆದೇಶಿಸಿದೆ.
ತಮ್ಮ ವಿರುದ್ಧ ಏಕಸದಸ್ಯಪೀಠ ವಿಚಾರಣೆಗೆ ಆದೇಶಿಸಿ ನೀಡಿರುವ ತೀರ್ಪು ಸಮ್ಮತವಲ್ಲ ಎಂದು ಆಕ್ಷೇಪಿಸಿ ಪ್ರೊ ಲಿಂಗರಾಜ ಗಾಂಧಿ ಸಲ್ಲಿಸಿರುವ ಮೇಲ್ಮನವಿಯನ್ನು ಹಿರಿಯ ನ್ಯಾಯಮೂರ್ತಿ ಬಿವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಗಾಂಧಿ ಪರ ವಕೀಲರು ವಾದಿಸಿ, ಅರ್ಜಿದಾರರು ನಿಗದಿಯಂತೆ ರಂಗಸ್ವಾಮಿ ಅವರ ದಾಖಲೆಗಳನ್ನು ಕಳುಹಿಸಿದ್ದಾರೆ. ಆದರೆ, ರಂಗಸ್ವಾಮಿ ನ್ಯಾಯಾಲಯಕ್ಕೆ ಹಲವು ಅಂಶಗಳನ್ನು ಮರೆಮಾಚಿ ಗಾಂಧಿ ವಿರುದ್ಧ ಆರೋಪ ಮಾಡಿದ್ದಾರೆ. ವಾಸ್ತವಾಂಶಗಳನ್ನು ಮುಚ್ಚಿಟ್ಟು ರಂಗಸ್ವಾಮಿ ಇಂತಹ ಆದೇಶ ಪಡೆದಿದ್ದಾರೆ ಎಂದು ವಿವರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವಿವಿಯ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ವಿರುದ್ಧ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ:
ಮೈಸೂರಿನ ಕೆಎಸ್ಒಯುನಲ್ಲಿರುವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಎ. ರಂಗಸ್ವಾಮಿ ಅವರು ತಮಗೆ ಗಂಗೂಬಾಯಿ ಹಾನಗಲ್ ವಿವಿ ಕುಲಪತಿ ಆಗುವ ಅವಕಾಶವನ್ನು ಕುಲಸಚಿವ ಪ್ರೊ ಲಿಂಗರಾಜ ಗಾಂಧಿ ತಪ್ಪಿಸಿದ್ದಾರೆ. ಶೋಧನಾ ಸಮಿತಿಗೆ ತಮ್ಮ ವಿರುದ್ಧ ಸುಳ್ಳು ವರದಿ ನೀಡಿದ್ದರಿಂದ ತಮಗೆ ಕುಲಪತಿ ಹುದ್ದೆ ತಪ್ಪಿದೆ ಎಂದು ಆರೋಪಿಸಿದ್ದ ರಂಗಸ್ವಾಮಿ, ಇನ್ನಾದರೂ ತಮ್ಮನ್ನು ಕುಲಪತಿ ಹುದ್ದೆಗೆ ಪರಿಗಣಿಸಲು ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯಪೀಠ ಕಳೆದ ಸೆಪ್ಟೆಂಬರ್ 7ರಂದು, ಡಾ ಎ ರಂಗಸ್ವಾಮಿ ಅವರಿಗೆ ಕುಲಪತಿ ಹುದ್ದೆ ತಪ್ಪಿಸಿದ ಆರೋಪ ಸಂಬಂಧ ಪ್ರೊ ಲಿಂಗರಾಜ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಆದೇಶಿಸಿತ್ತು.