ಬೆಂಗಳೂರು:ಧಾರವಾಡ ಹಾಗೂ ಕಲಬುರಗಿಗಳಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ವಕೀಲ ಎನ್.ಪಿ.ಅಮೃತೇಶ್ 2014 ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಎರಡು ಪೀಠಗಳನ್ನು ರಚನೆ ಮಾಡಿರುವುದರಿಂದ ಬಡ ಕ್ಷಕಿದಾರರಿಗೆ ತ್ವರಿತ ನ್ಯಾಯದಾನ ಸಿಗುತ್ತಿದೆ. ವ್ಯಾಜ್ಯ ವೆಚ್ಚ ತಗ್ಗುವ ಜತೆಗೆ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿನ ಉದ್ದೇಶ ಈಡೇರಿದೆ ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರಿಗೆ ದಂಡದಿಂದ ವಿನಾಯಿತಿ: ಅರ್ಜಿದಾರರಿಗೆ ದಂಡ ವಿಧಿಸಲು ನ್ಯಾಯಾಲಯ ಬಯಸಿತ್ತು. ಆದರೆ, ಅವರಿಗೆ 62 ವರ್ಷ ವಯಸ್ಸಾಗಿದ್ದು, ಹಿರಿಯ ನಾಗರಿಕರು ಎಂದು ಪರಿಗಣಿಸಲಾಗಿದೆ. ಈ ಹಿಂದೆ ಕೆಲವು ನೈಜ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿರುವುದನ್ನು ಪರಿಗಣಿಸಿ, ದಂಡದಿಂದ ವಿನಾಯಿತಿ ನೀಡಲಾಗಿದೆ. ಆದರೆ ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಸಮಾಜದಲ್ಲಿ ಸ್ಥಳೀಯವಾಗಿ ನ್ಯಾಯ ಲಭ್ಯವಾಗದೇ ಇದ್ದಾಗ ಜನರು ಅಂತಿಮವಾಗಿ ನ್ಯಾಯಾಲಯವೆಂಬ ದೇಗುಲಕ್ಕೆ ಆಗಮಿಸುತ್ತಾರೆ. ಈ ದೇವಾಲಯವನ್ನು ಜಾತಿ, ಧರ್ಮ, ಲಿಂಗ ಅಥವಾ ಜನ್ಮಸ್ಥಳ ಯಾವುದೇ ಬೇಧ ಭಾವ ಇಲ್ಲದೆ ಪೂಜಿಸುತ್ತಿದ್ದಾರೆ. ಧಾರವಾಡ ಹಾಗೂ ಕಲಬುರಗಿ ಪೀಠಗಳ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯ ದೊರಕುತ್ತಿದೆ. ಯುವ ವಕೀಲರಿಗೆ ಉದ್ಯೋಗಾವಕಾಶ ದೊರಕುತ್ತಿದೆ. ಆ ಮೂಲಕ ನ್ಯಾಯದಾನ ವ್ಯವಸ್ಥೆಯ ಉದ್ದೇಶ ಈಡೇರಿದೆ.