ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಸರ್ಕಾರಗಳು ಜನತೆಯ ಮೇಲೆ ವಿಧಿಸಿರುವ ಲಾಕ್ ಡೌನ್ ತೆರವು ಮಾಡುವವರೆಗೆ ಬ್ಯಾಂಕ್ಗಳು ಯಾವುದೇ ರೀತಿಯ ಸಾಲ ವಸೂಲಾತಿಗೆ ಮುಂದಾಗಬಾರದು. ಒಂದು ವೇಳೆ ಯಾವುದೇ ಕೋರ್ಟ್ ವಸೂಲಿ ಮಾಡಲು ಅನುಮತಿ ನೀಡಿದ್ದರೂ, ಬ್ಯಾಂಕ್ಗಳು ರಾಜ್ಯದಲ್ಲಿ ವಸೂಲಿ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಎಲ್ಲ ಬ್ಯಾಂಕ್ಗಳಿಗೆ ಆದೇಶ ನೀಡಿದೆ.
ಬ್ಯಾಂಕ್ಗಳ ಸಾಲ ವಸೂಲಿಗೆ ಹೈಕೋರ್ಟ್ ತಡೆ ಸಾಲ ವಸೂಲಾತಿ ಮಂಡಳಿ (ಡಿ.ಆರ್.ಟಿ) ವ್ಯಕ್ತಿಯೊಬ್ಬರ ಸಾಲ ವಸೂಲಿ ಸಂಬಂಧ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ.
ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ತಮ್ಮ ಆಸ್ತಿ ಹರಾಜು ಹಾಕಲು ಮುಂದಾಗಿರುವ ಕ್ರಮಕ್ಕೆ ಮತ್ತು ಡಿಆರ್ಟಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಜಿ.ನರೇಂದರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ರಾಜ್ಯದಲ್ಲಿ ಲಾಕ್ ಡೌನ್ ತೆರವಾಗುವವರೆಗೆ ಕಾನೂನು ಕ್ರಮ ಜರುಗಿಸಬಾರದು ಎಂದು ಆದೇಶಿಸಿದೆ. ಪ್ರಸ್ತುತ ರಾಜ್ಯಾದ್ಯಂತ ಸರ್ಕಾರ ಅಗತ್ಯ ಸರಕು ಸೇವೆ ಪೂರೈಸಲು ಮಾತ್ರ ಈ ಅವಧಿಯಲ್ಲಿ ಅನುಮತಿ ನೀಡಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ತಮ್ಮ ಸಾಲ ವಸೂಲಿಗಾಗಿ ಸಾಲಗಾರರ ಆಸ್ತಿ ಹರಾಜು ಮಾಡುವ ಕ್ರಮ ಸರ್ಕಾರದ ಆದೇಶದ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.
ಹೀಗಾಗಿ ಬ್ಯಾಂಕ್ಗಳು ಲಾಕ್ ಡೌನ್ ತೆರವಾಗುವವರೆಗೆ ಕಾನೂನು ರೀತಿಯಲ್ಲೂ ಸಾಲ ವಸೂಲಿಗೆ ಮುಂದಾಗಬಾರದು. ಒಂದು ವೇಳೆ ಬ್ಯಾಂಕ್ಗಳು ಸಾಲ ವಸೂಲಿ ಮಾಡಿದ್ದೇ ಆದರೆ, ಅಂತಹ ಬ್ಯಾಂಕುಗಳ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಬಹುದು ಎಂದು ಸೂಚಿಸಿದೆ.
ಆದೇಶದ ಪ್ರತಿಯನ್ನು ಗೃಹ ಇಲಾಖೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಲುಪಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ಗೆ ಸೂಚನೆ ನೀಡಿದೆ. ಈಚೆಗಷ್ಟೇ ಆರ್.ಬಿ.ಐ ಕೂಡ ಇಎಂಐ ಸೇರಿದಂತೆ ಮುಂದಿನ ಮೂರು ತಿಂಗಳ ಕಾಲ ಯಾವುದೇ ಸಾಲ ಕೇಳದಂತೆ ಬ್ಯಾಂಕ್ಗಳಿಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಿದೆ.