ಕರ್ನಾಟಕ

karnataka

ETV Bharat / state

ಕೆಆರ್‌ಎಸ್‌ ಅಣೆಕಟ್ಟೆ ಸುತ್ತ 30 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ: ಹೈಕೋರ್ಟ್‌ ಆದೇಶ - ಗಣಿಗಾರಿಕೆ ನಿಷೇಧ

ಕೆಆರ್‌ಎಸ್‌ ಅಣೆಕಟ್ಟಿನ ಸುತ್ತ 30 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಹೈಕೋರ್ಟ್‌ ನಿಷೇಧಿಸಿ ಆದೇಶ ವಿಧಿಸಿದೆ.

ಹೈಕೋರ್ಟ್‌ ಆದೇಶ
ಕೆಆರ್‌ಎಸ್‌ ಅಣೆಕಟ್ಟಿನ ಸುತ್ತ ಗಣಿಗಾರಿಕೆಗೆ ನಿಷೇಧ: ಹೈಕೋರ್ಟ್‌ ಆದೇಶ

By ETV Bharat Karnataka Team

Published : Jan 8, 2024, 3:37 PM IST

Updated : Jan 8, 2024, 3:52 PM IST

ಬೆಂಗಳೂರು:ರಾಜ್ಯದ ಜನರ ಬೆವರು ಮತ್ತು ರಕ್ತ ಹರಿಸಿ ನಿರ್ಮಾಣಗೊಂಡಿರುವ ಕೃಷ್ಣ ರಾಜ ಸಾಗರ(ಕೆಆರ್‌ಎಸ್ ಅಣೆಕಟ್ಟು )ದ ಸುತ್ತಲು ಗಣಿಗಾರಿಕೆ ನಡೆಸಿದಲ್ಲಿ ಇಡೀ ಡ್ಯಾಮ್ ಮಾತ್ರವಲ್ಲದೆ, ನಾಡಿಗೆ ದುರಂತ ತಂದೊಡ್ಡಬಹುದು ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಡ್ಯಾಮ್ ಸುತ್ತಲು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸದಂತೆ ನಿರ್ಬಂಧ ವಿಧಿಸಿ ಆದೇಶಿಸಿದೆ.

ಮಂಡ್ಯ ಜಿಲ್ಲೆಯ ಚಿನಕುರಳಿ ಗ್ರಾಮದ ಸಿ ಜಿ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಅಲ್ಲದೆ, ಧನ್​ಬಾದ್‌ನಲ್ಲಿರುವ ಭಾರತೀಯ ಗಣಿ ಮತ್ತು ಇಂಧನ ಸಂಶೋಧನಾ ಸಂಸ್ಥೆಯಿಂದ ಅಣೆಕಟ್ಟು ಕುರಿತಂತೆ ವೈಜ್ಞಾನಿಕ ಸಮೀಕ್ಷೆಗಾಗಿ ಆದೇಶ ನೀಡಲಾಗಿದೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವವರೆಗೂ ಅಣೆಕಟ್ಟು ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿಯೂ ಗಣಿಗಾರಿಕೆ ನಡೆಯಬಾರದು ಎಂದು ಪೀಠ ತಿಳಿಸಿದೆ.

ಅಲ್ಲದೆ, ಅಣೆಕಟ್ಟು ಸುತ್ತಮುತ್ತಲಿನ ಭಾಗಗಳಲ್ಲಿ ಹಲವು ಬಾರಿ ದೊಡ್ಡ ಶಬ್ಧ ಕೇಳಿ ಬಂದಿದ್ದು, ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಅಣೆಕಟ್ಟಿನ ಸುತ್ತಲಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದಲ್ಲಿ ಗಂಭೀರ ಪರಿಣಾಮವಾಗಲಿದೆ ಎಂದು ಪೀಠ ತಿಳಿಸಿತು.

ಜೊತೆಗೆ, ಕೃಷ್ಣರಾಜ ಸಾಗರ ಅಣೆಕಟ್ಟು ಐತಿಹಾಸಿಕ ಇತಿಹಾಸ ಮತ್ತು ಮೌಲ್ಯವನ್ನು ಹೊಂದಿದೆ. ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣ ರಾಜ ಒಡೆಯರ್, ದೇಶದ ಹೆಮ್ಮೆಯ ಪುತ್ರ ಸರ್ ಎಂ ವಿಶ್ವೇಶ್ವರಯ್ಯರ ಕೊಡುಗೆ ದೊಡ್ಡ ಪ್ರಮಾಣದ್ದಾಗಿದೆ. ಈ ಸಂಬಂಧ ತೀ.ತಾ. ಶರ್ಮ ಅವರ ಸರ್ ಎಂ ವಿಶ್ವೇಶ್ವರಯ್ಯನವರ ಕುರಿತ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಕಾವೇರಿ ನೀರಿಗಾಗಿ ಮೂರು ರಾಜ್ಯಗಳು ಹೋರಾಡುತ್ತಿವೆ. ಆದರೆ, ಕೆಆರ್​ಎಸ್ ಅಣೆಕಟ್ಟು ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ. ಅಣೆಕಟ್ಟೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ. ಅಣೆಕಟ್ಟಿಗೆ ತೊಂದರೆಯಾದರೆ ಇಡೀ ರಾಜ್ಯಕ್ಕೇ ಗಂಭೀರ ಆಪತ್ತು ಬರಲಿದೆ. ಅಣೆಕಟ್ಟೆಗೆ ಧಕ್ಕೆಯಾಗುವಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ'' ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರು ತಮ್ಮ ಜಮೀನಿನಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಹಲವು ಷರತ್ತುಗಳೊಂದಿಗೆ ಅನುಮತಿ ನೀಡಿದ್ದರು. ಜೊತೆಗೆ, ಕಾವೇರಿ ನಿರಾವರಿ ನಿಗಮದ ವತಿಯಿಂದ ನಡೆಸುವ ಪರೀಕ್ಷಾರ್ಥ ಬ್ಲಾಸ್ಟಿಂಗ್ ನಂತರ ಸಲ್ಲಿಸುವ ವರದಿಯನ್ನು ಪರಿಶೀಲಿಸಿ ಸಕ್ಷಮ ಪ್ರಾಧಿಕಾರ ಕೈಗೊಳ್ಳಬಹುದಾದ ನಿರ್ಧಾರಗಳಿಗೆ ಬದ್ಧರಾಗಿರಬೇಕು. ಜೊತೆಗೆ, ವರದಿ ಬರುವವರೆಗೂ ಪರಿವರ್ತಿತ ಭೂಮಿಯಲ್ಲಿ ಉದ್ದೇಶಿತ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಈ ಷರತ್ತನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ

Last Updated : Jan 8, 2024, 3:52 PM IST

ABOUT THE AUTHOR

...view details