ಬೆಂಗಳೂರು: ಸಂತ್ರಸ್ತೆ ಎನ್ನಲಾದ ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಹಾಗೂ ಮೊಬೈಲ್ ವಿಡಿಯೋ ಕಾಲ್‌ನಲ್ಲಿ ದೇಹದ ಖಾಸಗಿ ಭಾಗ ತೋರಿಸಿದ ಅಂಶವನ್ನು ಪರಿಗಣಿಸಿರುವ ಹೈಕೋರ್ಟ್, ಅತ್ಯಾಚಾರ ಮತ್ತು ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಚಿತ್ರ ರವಾನಿಸಿದ ಪ್ರಕರಣ ಎದುರಿಸುತ್ತಿರುವ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಸಂತ್ರಸ್ತೆ ಎಂದು ಹೇಳಲ್ಪಟ್ಟಿರುವ ಮಹಿಳೆಯೇ ವಿಡಿಯೋ ಕಾಲ್ ವೇಳೆ ತನ್ನ ಖಾಸಗಿ ಅಂಗ ತೋರಿಸಿದನ್ನು ಸ್ಕ್ರೀನ್‌ಶಾಟ್ ತೆಗೆದು ಆಕೆಯ ಪತಿಗೇ ಕಳುಹಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕೊಪ್ಪಳ ನಿವಾಸಿ ಬಸನಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರಿದ್ದ ಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಒಪ್ಪಿತ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯು ಮದುವೆಗೆ ಮುನ್ನ ಮತ್ತು ನಂತರವೂ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದು, ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಸಂತ್ರಸ್ತೆ ನಿರಂತರವಾಗಿ ಮುಂಜಾನೆ ಬೆಳಗ್ಗೆ 4-5 ಗಂಟೆ ನಡುವೆ ಪತಿಯ ಮೊಬೈಲ್ ಫೋನ್‌ನಿಂದ ಆರೋಪಿಗೆ ವಿಡಿಯೋ ಕಾಲ್ ಮಾಡಿ, ತನ್ನ ಖಾಸಗಿ ಭಾಗ ತೋರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದನ್ನು ಗಮನಿಸಿದರೆ ಆರೋಪಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಮತ್ತು ತಮ್ಮ ದೇಹದ ಖಾಸಗಿ ಭಾಗ ತೋರಿಸಲು ಸಂತ್ರಸ್ತೆ ಒಪ್ಪಿಗೆ ಇತ್ತು ಎಂಬುದನ್ನು ಸೂಚಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.ಅಲ್ಲದೇ, ಆರೋಪಿ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪವಿಲ್ಲ ಹಾಗೂ ಆತನಿಗೆ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ. ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಚಿತ್ರ ರವಾನಿಸಿದ ಆರೋಪ ಸಂಬಂಧ ಐಟಿ ಕಾಯ್ದೆ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂ. ದಂಡ ವಿಧಿಸಬಹುದಾಗಿದೆ ಎಂದು ಹೇಳಿದೆ.
ಜಾಮೀನು ನೀಡಿದರೆ ಮಹಿಳೆಗೆ ಜೀವಕ್ಕೆ ಅಪಾಯವಿದೆ ಎಂಬ ಬಗ್ಗೆ ಆಕ್ಷೇಪವಿದೆ. ಲೈಂಗಿಕ ಸಂಪರ್ಕ ಬೆಳೆಸಲು ಮತ್ತು ಖಾಸಗಿ ಅಂಗ ತೋರುವುದಕ್ಕೆ ಸಂತ್ರಸ್ತೆಯೇ ಒಪ್ಪಿಗೆ ನೀಡಿರುವ ಸಂದರ್ಭದಲ್ಲಿ ನಿಜವಾಗಿಯೂ ಆರೋಪಿಯಿಂದ ಜೀವಕ್ಕೆ ಅಪಾಯವಿದೇಯೇ ಅಥವಾ ಇಲ್ಲವೇ ಎಂಬ ಅಂಶ ವಿಚಾರಣಾ ನ್ಯಾಯಾಲಯದಲ್ಲಿಯೇ ನಿರ್ಣಯವಾಗಬೇಕಿದೆ. ಆದ್ದರಿಂದ ಆರೋಪಿಗೆ ಕಠಿಣ ಷರತ್ತು ವಿಧಿಸಿ ಜಾಮೀನು ನೀಡಬಹುದು ಎಂದು ತೀರ್ಮಾನಿಸಿ, ಜಾಮೀನು ನೀಡಿದೆ.