ಬೆಂಗಳೂರು: ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವದ ದಿನ ಧ್ವಜಾರೋಹಣಕ್ಕೆ ಮುನ್ನ ಸ್ಥಳದಲ್ಲಿ ಇರಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಧೀಶರು ಎತ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವರದಿ ಕೇಳಿದೆ.
ಈ ಕುರಿತು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಅವರು ಮಾಹಿತಿ ನೀಡಿದ್ದು, ಘಟನೆ ಸಂಬಂಧ ವಾಸ್ತವಿಕ ಸಂಗತಿಗಳನ್ನು ಅರಿಯಲು ವರದಿ ಕೇಳಲಾಗಿದೆ. ವರದಿ ಪರಿಶೀಲಿಸಿ ಹೈಕೋರ್ಟ್ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿ ಇಡುವುದಕ್ಕೆ ಸಂಬಂಧಿಸಿದಂತೆ ಪೂರ್ಣ ಪೀಠವು ಹಿಂದೆಯೇ ಗೊತ್ತುವಳಿ ಅಂಗೀಕರಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿ ಇಡುವುದಕ್ಕೆ ಸಂಬಂಧಿಸಿದ ವಿಚಾರ ಪೂರ್ಣ ಪೀಠದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಸರ್ಕಾರದ ಸುತ್ತೋಲೆಗಳನ್ನು ನ್ಯಾಯಾಂಗ ಅಳವಡಿಸಿಕೊಂಡ ಮೇಲೆ ಅದು ಇಲ್ಲಿಗೆ ಅನ್ವಯಿಸುತ್ತದೆ. ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಹೈಕೋರ್ಟ್ ಪೂರ್ಣಪೀಠವು ಈ ಪ್ರಕ್ರಿಯೆ ಕೈಗೊಳ್ಳುತ್ತದೆ. ಆ ಬಳಿಕ ಸಂಬಂಧಪಟ್ಟ ಎಲ್ಲರಿಗೂ ಸುತ್ತೋಲೆ ರವಾನಿಸಲಾಗುತ್ತದೆ ಎಂದು ರಿಜಿಸ್ಟ್ರಾರ್ ಜನರಲ್ ಸ್ಪಷ್ಟಪಡಿಸಿದ್ದಾರೆ.