ಬೆಂಗಳೂರು :ಲಾಕ್ಡೌನ್ ಬಳಿಕ ಶಾಲಾ ಮಕ್ಕಳಿಗೆ ಬಿಸಿಯೂಟ ಹಾಗೂ ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಸದ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವರದಿಯನ್ನು ಪ್ರಮಾಣಪತ್ರದೊಂದಿಗೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ನಿರ್ದೇಶಿಸಿದೆ.
ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಲಾಕ್ಡೌನ್ ಬಳಿಕ ಶಾಲಾ ಮಕ್ಕಳಿಗೆ ಸಿಗುತ್ತಿದ್ದ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಗಳಿಂದ ನೀಡುತ್ತಿದ್ದ ಆಹಾರ ಪದಾರ್ಥಗಳ ಪೂರೈಕೆ ಸ್ಥಗಿತವಾಗಿದೆ.
ಪರಿಣಾಮವಾಗಿ ಮಕ್ಕಳಿಗೆ ಅಪೌಷ್ಠಿಕತೆ ಕಾಡುತ್ತಿದೆ. ಇದೇ ವೇಳೆ ಬಾಲ ಕಾರ್ಮಿಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಸಿದ ಪೀಠ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ಹಾಗೂ ಕೇಂದ್ರ ಸರ್ಕಾರದ ಮಧ್ಯಾಹ್ನ ಉಪಹಾರ ನಿಯಮಗಳು-2015ರ ಪ್ರಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಅಥವಾ ದಿನಸಿ ಪದಾರ್ಥಗಳನ್ನು ಪೂರೈಸಬೇಕು.
ಅಂತೆಯೇ ಅಂಗನವಾಡಿ ಮೂಲಕವೂ ಆಹಾರ ಪೂರೈಸಬೇಕು. ಇಲ್ಲದಿದ್ದರೆ ಸಂವಿಧಾನದ ವಿಧಿ-21ರ ಜೀವಿಸುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ, ಆಹಾರ ವಂಚಿತ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ, ಮಧ್ಯಾಹ್ನದ ಊಟ ಒದಗಿಸುವ ಬಗ್ಗೆ ಸರ್ಕಾರ ಕ್ರಮಕೈಗೊಂಡಿರುವ ಕುರಿತು ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿತು.
ಮಾಸ್ಕ್ ಕೊರತೆ ನೀಗಿಸಲು ಕೇಂದ್ರಕ್ಕೆ ಸೂಚನೆ :ವಿಚಾರಣೆ ಸಂದರ್ಭದಲ್ಲಿ 25 ರೂಪಾಯಿಗೆ ಎನ್ -95 ಮಾಸ್ಕ್‌ಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಜನೌಷಧಿ ಕೇಂದ್ರಗಳಲ್ಲಿ ದಾಸ್ತಾನು ಕೊರತೆ ಇದ್ದು, ಮಾಸ್ಕ್‌ಗಳು ಲಭ್ಯವಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆಲ್ಲರಿಗೂ ಮಾಸ್ಕ್ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೀಠ ನಿರ್ದೇಶಿಸಿತು.