ಕರ್ನಾಟಕ

karnataka

ETV Bharat / state

ಕಾವೇರಿ ಕೂಗು ಅಭಿಯಾನದಡಿ ಹಣ ಸಂಗ್ರಹ: ತನಿಖೆ ಕುರಿತು ಸರ್ಕಾರದ ನಿಲುವು ಕೇಳಿದ ಹೈಕೋರ್ಟ್ - ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಈಶ ಫೌಂಡೇಶನ್

ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಈಶ ಫೌಂಡೇಶನ್ ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿತು.

The High Court asked government's stand on investigating cauvery calling campaign
The High Court asked government's stand on investigating cauvery calling campaign

By

Published : Mar 8, 2021, 8:01 PM IST

ಬೆಂಗಳೂರು:ಕಾವೇರಿ ಕೂಗು ಅಭಿಯಾನವನ್ನು ಸರ್ಕಾರಿ ಯೋಜನೆ ಎಂದು ಬಿಂಬಿಸಿ ಸಾರ್ವಜನಿಕರಿಂದ ಹಣ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುವ ಕುರಿತು ಸರ್ಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.

ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಈಶ ಫೌಂಡೇಶನ್ ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಸ್ಪಷ್ಟನೆ ನೀಡಿ, ಕಾವೇರಿ ಕೂಗು ಯೋಜನೆ ಸಂಪೂರ್ಣವಾಗಿ ಈಶ ಫೌಂಡೇಶನ್/ಈಶ ಔಟ್ ರೀಚ್​ಗೆ ಸಂಬಂಧಿಸಿದ್ದು. ಈ ಯೋಜನೆಯಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಯೋಜನೆಗೆ ಸರ್ಕಾರದ ಯಾವುದೇ ಭೂಮಿ ಅಥವಾ ಹಣ ಕೊಡುತ್ತಿಲ್ಲ ಎಂದು ವಿವರಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಕಾವೇರಿ ಕೂಗು ಅಭಿಯಾನವನ್ನು ಸರ್ಕಾರಿ ಯೋಜನೆ ಎಂದು ಬಿಂಬಿಸಿ ಹಣ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ಯೋಜನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀವು ಈಗಷ್ಟೇ ಸ್ಪಷ್ಟನೆ ನೀಡಿದ್ದೀರಿ. ಅದೂ ನ್ಯಾಯಾಲಯ ಹಲವು ಬಾರಿ ಪ್ರಶ್ನಿಸಿದ ಮೇಲೆ. ಈಶ ಫೌಂಡೇಶನ್ ಕೂಡ ಇದು ಸರ್ಕಾರದ ಯೋಜನೆಯಲ್ಲ ಎಂದು ತಿಳಿಸಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡಿದ್ದಾರೆ. ಹೀಗಾಗಿ, ಕಾವೇರಿ ಕೂಗು ಯೋಜನೆಯನ್ನು ಸರ್ಕಾರಿ ಯೋಜನೆ ಎಂದು ಹಣ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲು ಅಧಿಕಾರಿ ನೇಮಕ ಮಾಡಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸಿ. ಇಲ್ಲದಿದ್ದರೇ ನ್ಯಾಯಾಲಯವೇ ಸೂಕ್ತ ನಿರ್ದೇಶನ ನೀಡಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಸದ್ಗುರು ಮುಖ್ಯಸ್ಥಿಕೆಯ ಈಶ ಫೌಂಡೇಶನ್ ಕಾವೇರಿ ನದಿ ತಪ್ಪಲಿನುದ್ದಕ್ಕೂ ಗಿಡ ನೆಡುವುದಾಗಿ ಪ್ರಚಾರ ಮಾಡುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿ ವಕೀಲ ಎ.ವಿ ಅಮರನಾಥನ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಯೋಜನೆ ಒಳ್ಳೆಯದಾದರೂ ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕರಿಂದ ಅಂದಾಜು 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸಲು ಈಶ ಫೌಂಡೇಶನ್ ಮುಂದಾಗಿದೆ ಎಂದು ಆರೋಪಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಯೋಜನೆಯಲ್ಲಿ ಸರ್ಕಾರದ ಪಾತ್ರವೇನು ಎಂದು ಸ್ಪಷ್ಟೀಕರಣ ಕೇಳಿತ್ತು. ಆದರೆ, ಸರ್ಕಾರ ಈವರೆಗೆ ಸ್ಪಷ್ಟನೆ ನೀಡಿರಲಿಲ್ಲ. ಸರ್ಕಾರಕ್ಕೂ ಮೊದಲೇ ಸ್ಪಷ್ಟನೆ ನೀಡಿದ್ದ ಈಶ ಫೌಂಡೇಶನ್ ಯೋಜನೆಯನ್ನು ಈಶ ಔಟ್ ರೀಚ್ ಕೈಗೊಂಡಿದೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ಹಾಗೆಯೃ ಸರ್ಕಾರಿ ಜಾಗದಲ್ಲಿ ಗಿಡ ನೆಡುತ್ತಿಲ್ಲ. ಬದಲಿಗೆ, ರೈತರ ಜಮೀನುಗಳಲ್ಲಿ ಗಿಡ ನೆಡಲಾಗುತ್ತದೆ ಎಂದಿತ್ತು.

ABOUT THE AUTHOR

...view details