ಬೆಂಗಳೂರು :ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ತೆರವು ಕುರಿತಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅಮೈಕಾಸ್ ಕ್ಯೂರಿಯನ್ನಾಗಿ (ನ್ಯಾಯಾಲಯಕ್ಕೆ ನೆರವಾಗುವವರು) ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಅರ್ಜಿಯನ್ನು ದಾಖಲಿಸಿಕೊಂಡಿತ್ತು. ಈ ಅರ್ಜಿಯ ವಿಚಾರಣೆ ನಡೆಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ಅರ್ಜಿಗೆ ಸಂಬಂಧಿಸಿದಂತೆ ಸುಮಾರು ಐದಕ್ಕೂ ಹೆಚ್ಚು ಪ್ರತ್ಯೇಕ ಅರ್ಜಿಗಳು ದಾಖಲಾಗಿದ್ದವು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಗೆ ಅಮೈಕಾಸ್ ಕ್ಯೂರಿ ಅವರನ್ನು ನೇಮಕ ಮಾಡಿದ್ದು, ಎಲ್ಲ ಅರ್ಜಿದಾರರು ಅಮೈಕಾಸ್ ಕ್ಯೂರಿ ಅವರಿಗೆ ತಮ್ಮ ಲಿಖಿತ ವಾದವನ್ನು ಸಲ್ಲಿಸಬೇಕು. ಅದರ ಆಧಾರದಲ್ಲಿ ಅರ್ಜಿ ವಿಚಾರಣೆ ಮುಂದುವರೆಸುವುದಾಗಿ ನ್ಯಾಯಪೀಠ ತಿಳಿಸಿತು.
ನ್ಯಾಯಪೀಠದ ಅಸಮಾಧಾನ:ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 7,630 ಕಾನೂನುಬಾಹಿರ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 2,140 ಕಟ್ಟಡಗಳನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಉಪ ವಿಭಾಗ ಮಾಡಲಾಗಿದ್ದು, 1,563 ಕಟ್ಟಡಗಳನ್ನು ಧ್ವಂಸ ಮಾಡಲಾಗಿದೆ, 457 ಕಟ್ಟಡಗಳನ್ನು ಹಾಗೆ ಉಳಿಸಲಾಗಿದೆ, 58 ಕಟ್ಟಡಗಳನ್ನು ಸ್ಥಳಾಂತರಿಸಲಾಗಿದ್ದು, 7 ಕಟ್ಟಡಗಳನ್ನು ಹಾಗೆ ಉಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಸಲ್ಲಿಸಿರುವ ಎಂದು ವಿವರಿಸಲಾಗಿತ್ತು. ಇದನ್ನು ಪರಿಶೀಲಿಸಿ ನ್ಯಾಯಪೀಠ ಕಾನೂನುಬಾಹಿರ ಕಟ್ಟಡಗಳನ್ನು ಸರಿಯಾದ ರೀತಿಯಲ್ಲಿ ತೆರವು ಮಾಡುವುದಕ್ಕೆ ಮುಂದಾಗಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರವು ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಟ್ಟಿಯಲ್ಲಿ ದೇವಸ್ಥಾನ, ಮಸೀದಿ, ಗುರುದ್ವಾರ ಅಥವಾ ಚರ್ಚ್ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಹೀಗಾಗಿ, ಕಟ್ಟಡಗಳ ಗುರುತನ್ನು ಉಲ್ಲೇಖಿಸಿ ಪ್ರತ್ಯೇಕವಾದ ಪಟ್ಟಿ ನೀಡಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತು. ಕೆಲ ಜಿಲ್ಲೆಗಳಲ್ಲಿ ತೆರವು ಕಾರ್ಯು ನಡೆಯುತ್ತಿದೆ ಮತ್ತೆ ಕೆಲವು ಜಿಲ್ಲೆಗಳಲ್ಲಿ ಕಟ್ಟಡ ತೆರವು ಕಾರ್ಯಾಚರಣೆಯು ನಾಮ್ಕೆವಾಸ್ತೆಯಾಗಿದೆ.