ಬೆಂಗಳೂರು:ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳು ಅಸಹಜವಾಗಿ ಸಾವನ್ನಪ್ಪುತ್ತಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಆನೆ ಶಿಬಿರಗಳ ಸ್ಥಿತಿಗತಿ, ಅಲ್ಲಿನ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸಿದೆ.
ವಕೀಲ ಎನ್.ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು.
ಅರ್ಜಿದಾರರು ಕಳೆದ ಬಾರಿ ವಿಚಾರಣೆ ವೇಳೆ ಆನೆಗಳ ಸಾವು ಕುರಿತು ನಿಖರವಾದ ಕಾರಣ ತಿಳಿಯಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಕೋರ್ಟ್ ಅರ್ಜಿದಾರರಿಗೆ ನೀವೆೇ ತಜ್ಞರ ಆಯ್ಕೆ ಮಾಡಿ ಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಅಮೃತೇಶ್ ನಾಲ್ವರು ತಜ್ಞರ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದ್ರು. ಇದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ನಾಲ್ವರು ಸಮಿತಿ ನೇಮಕ ಮಾಡಿದೆ.
ಅರ್ಜಿಯಲ್ಲಿ ಏನಿದೆ?
ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಸರಿ ಇಲ್ಲದೆ ಆನೆಗಳು ಸಾವನ್ನಪ್ಪುತ್ತಿವೆ. ಆನೆಗಳ ಶಿಬಿರಗಳಲ್ಲಿ ರೌಡಿ ರಂಗ ಸೇರಿ ಒಟ್ಟು 11 ಆನೆಗಳು ಆರೋಗ್ಯ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಹೀಗಾಗಿ ತಜ್ಞರ ಸಮಿತಿ ಮಾಡಿ ತನಿಖೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ರು.