ಕರ್ನಾಟಕ

karnataka

ETV Bharat / state

ವಿವಾಹ ಪ್ರಸ್ತಾಪ ನಿರಾಕರಿಸಿದ್ದ ಯುವತಿ ಹತ್ಯೆ ಮಾಡಿದ ಪಾತಕಿ : ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್! - High court announces punishment to murderer

ವಿವಾಹ ಪ್ರಸ್ತಾಪವನ್ನು ನಿರಾಕರಿಸಿದ್ದ ಯುವತಿಯನ್ನು ಹತ್ಯೆ ಮಾಡಿದ್ದ ಕಿಡಿಗೇಡಿ ಯುವಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

high-court
ಹೈಕೋರ್ಟ್

By

Published : Nov 25, 2020, 10:35 PM IST

ಬೆಂಗಳೂರು: ವಿವಾಹ ಪ್ರಸ್ತಾಪವನ್ನು ನಿರಾಕರಿಸಿದ್ದ ಯುವತಿಯನ್ನು ಹತ್ಯೆ ಮಾಡಿದ್ದ ಕಿಡಿಗೇಡಿ ಯುವಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.ಇದೇ ವೇಳೆ ವಿವಾಹ ಪ್ರಸ್ತಾಪವನ್ನು ಯುವತಿ ನಿರಾಕರಿಸಿದ್ದರಿಂದ ಯುವಕ ಹಠಾತ್ ಪ್ರಚೋದನೆಗೆ ಒಳಗಾಗಿ ಹತ್ಯೆ ಮಾಡಿದ ಎಂಬ ವಾದವನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ.

ಕಲಬುರ್ಗಿಯ 26 ವರ್ಷದ ವಿಜಯ್ ಅಲಿಯಾಸ್ ವಿಜೇಂದ್ರ ಶಿಕ್ಷೆಗೆ ಗುರಿಯಾಗಿರುವ ಪಾತಕಿ. ಈತ 2009ರ ಏಪ್ರಿಲ್ 24 ರ ಮಧ್ಯಾಹ್ನ ಯುವತಿ ಪುಷ್ಪಾಳ ಮನೆಗೆ ಏಕಾಏಕಿ ನುಗ್ಗಿ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪ್ರಸ್ತಾಪವಿಟ್ಟಿದ್ದ. ಒಪ್ಪದಿದ್ದರೆ ಬೇರೆ ಯಾರನ್ನೂ ಮದುವೆಯಾಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಈತನ ಪ್ರಸ್ತಾಪವನ್ನು ಯುವತಿ ಸಾರಾಸಗಟಾಗಿ ತಿರಸ್ಕರಿಸಿದ್ದಳು.

ಕೂಡಲೇ ಆರೋಪಿ ವಿಜೇಂದ್ರ ಯುವತಿಯ ದೇಹಕ್ಕೆ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದ. ಕೂಡಲೇ ಯುವತಿ ಪುಷ್ಪಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಆರೋಪಿ ವಿಜೇಂದ್ರನ ವಿರುದ್ಧ ಕಲಬುರ್ಗಿಯ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ 2016ರ ಜನವರಿ 23 ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು.

ಈ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಆರೋಪಿ ವಿಜೇಂದ್ರ ಹೈಕೋರ್ಟ್​ನ ಕಲಬುರ್ಗಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದಿಸಿ, ವಿಜೇಂದ್ರ ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಪುಷ್ಪಾ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಹಠಾತ್ ಪ್ರಚೋದನೆಗೆ ಒಳಗಾಗಿ ಹತ್ಯೆ ಮಾಡಿದ್ದಾನೆ ಎಂದು ಸಮಜಾಯಿಸಿ ನೀಡಲು ಪ್ರಯತ್ನಿಸಿದ್ದರು.

ಈ ವಾದವನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ನ್ಯಾ.ಎಸ್.ಸುನಿಲ್ ದತ್ ಯಾದವ್ ಹಾಗೂ ನ್ಯಾ.ಪಿ.ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ಸಾರಾಂಶ ನೋಡಿದರೆ ಆರೋಪಿ ಹತ್ಯೆ ಮಾಡುವ ಉದ್ದೇಶದಿಂದಲೇ ಶಸ್ತ್ರಸಜ್ಜಿತನಾಗಿ ಹೋಗಿರುವುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ ಪ್ರತಿಯೊಬ್ಬರಿಗೂ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಹಾಗಿದ್ದೂ, ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದಲೇ ಹಠಾತ್ ಪ್ರಚೋದನೆ ಉಂಟಾಗಿ ಕೊಲೆ ನಡೆಯಿತು ಎಂದು ಪ್ರಕರಣವನ್ನು ಪರಿಗಣಿಸುವುದು ತೀರಾ ಅಸಹ್ಯಕರ. ಇದೇ ಆಧಾರದಲ್ಲಿ ಆರೋಪಿಗೆ ಕಾನೂನಿನಿಂದ ರಕ್ಷಣೆ ನೀಡುವುದು ನ್ಯಾಯೋಚಿತವಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಹಾಗೆಯೇ ಆರೋಪಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

For All Latest Updates

TAGGED:

ABOUT THE AUTHOR

...view details