ಬೆಂಗಳೂರು: ಹೆಚ್‌ಬಿಆರ್ ಬಡಾವಣೆ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗದಲ್ಲಿ ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ 10 ವರ್ಷಗಳ ಬಳಿಕ ಮೇಲ್ಮನವಿ ಸಲ್ಲಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹೆಚ್‌ಬಿಆರ್ ಲೇಔಟ್ 3ನೇ ಹಂತದ ಬಡಾವಣೆ ನಿರ್ಮಾಣ ಹಿನ್ನೆಲೆಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ ನಗರದ ಚೋಳನಾಯಕನಹಳ್ಳಿ ಗ್ರಾಮದ ಸರ್ವೇ ನಂ.47ರಲ್ಲಿನ 17.5 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2021ರ ಫೆ.22ರಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶಿಸಿತ್ತು.
ಅದನ್ನು ಪ್ರಶ್ನಿಸಿ 2022ರ ಫೆ.25ರಂದು ಬಿಡಿಎ ಆಯುಕ್ತರು ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿಯನ್ನು 10 ವರ್ಷ ಕಾಲ ವಿಳಂಬವಾಗಿ ಸಲ್ಲಿಸಿದ ಬಿಡಿಎ ಕ್ರಮವನ್ನು ತರಾಟೆಗೆ ತೆಗೆದುಕೊಂಡು ಮೇಲ್ಮನವಿ ವಜಾಗೊಳಿಸಿತು.
ಮೇಲ್ಮನವಿಯನ್ನು ಸಲ್ಲಿಸಲು 2,540 ದಿನಗಳ ಕಾಲ ವಿಳಂಬ ಮಾಡಲಾಗಿದೆ. 2012ರಲ್ಲಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶಿಸಿದೆ. 2013ರಲ್ಲಿ ಕಾನೂನು ಅಧಿಕಾರಿ ಅಭಿಪ್ರಾಯ ನೀಡಿದ್ದಾರೆ. ಆದರೆ, ಅಂದಿನಿಂದಲೂ ಕಡತವು ಬಿಡಿಎ ಆಯುಕ್ತರ ಬಳಿಯಿದೆ. ಪ್ರಕರಣ ಸಂಬಂಧ ಸರ್ಕಾರ ಪ್ರಶ್ನಿಸಿದ ಮೇಲೆ ಎಚ್ಚೆತ್ತ ಬಿಡಿಎ ಆಯ್ತುಕ್ತರು ಮೇಲ್ಮನವಿ ಸಲ್ಲಿಸಿದ್ದಾರೆ. ಇಷ್ಟು ವಿಳಂಬ ಮಾಡುವುದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ಅನಿಸುತ್ತಿಲ್ಲ. ಇನ್ನೂ ಮೇಲ್ಮನವಿ ಸಲ್ಲಿಸಲು ಇಷ್ಟು ವಿಳಂಬ ಮಾಡಿರುವುದಕ್ಕೆ ಬಿಡಿಎ ಸೂಕ್ತ ಕಾರಣ ನೀಡಿಲ್ಲ ಎಂದು ತಿಳಿಸಿದ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.