ಕರ್ನಾಟಕ

karnataka

ETV Bharat / state

ಜವಾಬ್ದಾರಿಯುತ ಪಕ್ಷವಾಗಿ ತಪ್ಪು ಸರಿಪಡಿಸಿಕೊಳ್ಳಿ, ಕೋರ್ಟ್ ಕರುಣೆ ತೋರುವುದಿಲ್ಲ : ಹೈಕೋರ್ಟ್

ಅನಧಿಕೃತ ಶೆಡ್ ಎಂದು ತಿಳಿದ‌‌ ಮೇಲೂ ನೋಟಿಸ್ ನೀಡಿದರೆ‌ ಸಾಲದು. ಶೆಡ್ ತೆರವಿಗೆ ಕ್ರಮ‌ ಕೈಗೊಳ್ಳಬೇಕು ಎಂದು ಹೈಕೋರ್ಟ್​​ ಸೂಚಿಸಿತು. ಹಾಗೆಯೇ ನಗರ ಸಭೆ ಕೈಗೊಂಡ ಕಾನೂನು ಕ್ರಮ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ನಗರಸಭೆ ಆಯುಕ್ತರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

By

Published : Sep 30, 2020, 10:05 PM IST

ಬೆಂಗಳೂರು :ತಪ್ಪಾಗಿದ್ದರೆ ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಅದನ್ನು ನೀವೇ ಸರಿಪಡಿಸಿಕೊಳ್ಳಿ. ಆದರೆ, ಯಾವುದೇ ರಾಜಕೀಯ ಪಕ್ಷ ಅನಧಿಕೃತ ಕಟ್ಟಡಗಳ‌ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ, ಅದಕ್ಕೆ ನ್ಯಾಯಾಲಯ ಯಾವ ರೀತಿಯಲ್ಲೂ ದಯೆ ತೋರಿಸುವುದಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಎಚ್ಚರಿಕೆ ನೀಡಿದೆ.

ಚಿತ್ರದುರ್ಗ ನಗರಸಭೆಗೆ ಸೇರಿದ ಜಾಗವನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಡಿ.ಯಶೋಧರ ಅವರು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡು ತಾತ್ಕಾಲಿಕ ವಾಣಿಜ್ಯ ಶೆಡ್ ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ‌ ರಾಜಕೀಯ ಪಕ್ಷಗಳಿಗೆ ಈ ಎಚ್ಚರಿಕೆ ನೀಡಿದೆ. ವಿಚಾರಣೆ ವೇಳೆ ನಗರಸಭೆ ಪರ ವಕೀಲರು, ವಿವಾದಿತ ಪ್ರದೇಶದಲ್ಲಿ ಅನಧಿಕೃತ ಶೆಡ್ ನಿರ್ಮಾಣ ‌ಮಾಡಲಾಗಿದೆ. ಅದಕ್ಕಾಗಿ‌ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ,‌‌ ಅನಧಿಕೃತ ಶೆಡ್ ಎಂದು ತಿಳಿದ‌‌ ಮೇಲೂ ನೋಟಿಸ್ ನೀಡಿದರೆ‌ ಸಾಲದು. ಶೆಡ್ ತೆರವಿಗೆ ಕ್ರಮ‌ ಕೈಗೊಳ್ಳಬೇಕು ಎಂದು ಸೂಚಿಸಿತು. ಹಾಗೆಯೇ ನಗರ ಸಭೆ ಕೈಗೊಂಡ ಕಾನೂನು ಕ್ರಮ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ನಗರಸಭೆ ಆಯುಕ್ತರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಇದೇ ಸಂದರ್ಭದಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಭಾಗಿಯಾಗಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಪೀಠ, ವಿವಾದಿತ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿರುವವರೇ ಅದನ್ನು ತೆರವುಗೊಳಿಸುವುದು ಉತ್ತಮ. ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಈ ಕೆಲಸ ಮಾಡಬೇಕು. ಅನಧಿಕೃತ ಕಟ್ಟಡ ನಿರ್ಮಾಣದಲ್ಲಿ ಯಾವುದೇ ರಾಜಕೀಯ ಪಕ್ಷ ಭಾಗಿಯಾದರೂ ಅದಕ್ಕೆ ನ್ಯಾಯಾಲಯ ದಯೆ ತೋರುವುದಿಲ್ಲ ಎಂದು ಎಚ್ಚರಿಕೆ ನೀಡಿತು.

ಪ್ರಕರಣದ ಹಿನ್ನೆಲೆ : ಚಿತ್ರದುರ್ಗ ಜಿಲ್ಲೆಯ ಮೇಡನಹಳ್ಳಿ ಗ್ರಾಮದ ಸರ್ವೇ ನಂಬರ್ 47/3 ರಲ್ಲಿನ 19 ಗುಂಟೆ ಜಾಗವು ಮೂಲತಃ ಚಿತ್ರದುರ್ಗ ನಗರಸಭೆಗೆ ಸೇರಿದೆ. ಹಿಂದೆ ಆ ಜಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯವಿತ್ತು. ಬೇರೆಡೆ ಹೊಸ ಕಾರ್ಯಾಲಯ ನಿರ್ಮಿಸಿದ್ದರಿಂದ ಈ ಸ್ಥಳವನ್ನು ತೆರವುಗೊಳಿಸಿತ್ತು. ನಂತರ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ಯಶೋಧರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ 19 ಗುಂಟೆ ಜಾಗವನ್ನು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಜತೆಗೆ, ತಮ್ಮ ಪ್ರಭಾವ ಬಳಸಿ ಖಾತೆಯಲ್ಲಿ ಜಾಗವು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎಂಬುದಾಗಿ ತಿದ್ದುಪಡಿ ಮಾಡಿದ್ದರು. ನಂತರ ಅದೇ ಜಾಗವು ಜೆಡಿಎಸ್ ಪಕ್ಷಕ್ಕೆ ಸೇರಿದೆ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದು, ಅಲ್ಲಿ ಅನಧಿಕೃತವಾಗಿ ವಾಣಿಜ್ಯ ಶೆಡ್ ನಿರ್ಮಿಸುತ್ತಿದ್ದಾರೆ. ಅದಕ್ಕೆ ನಗರಸಭೆ ನಕ್ಷೆ ಮಂಜೂರಾತಿ ನೀಡಿಲ್ಲ. ಆದ್ದರಿಂದ ಈ ಜಾಗದ ಸಂರಕ್ಷಣೆಗೆ ಮತ್ತು ಅನಧಿಕೃತವಾಗಿ ಶೆಡ್ ನಿರ್ಮಿಸಿರುವ ಯಶೋಧರ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಮತ್ತು ನಗರಸಭೆ ಆಯುಕ್ತರಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details