ಬೆಂಗಳೂರು: ಕಳೆದ 2019ರಲ್ಲಿ ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ ಸುಮಾರು 80 ಎಕರೆ ಸರ್ಕಾರಿ ಭೂಮಿಯನ್ನು ಮೃತರು ಸೇರಿದಂತೆ ಅನರ್ಹರಿಗೆ ಮಂಜೂರು ಮಾಡಿದ್ದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಮಾಲೂರು ಶಾಸಕ ಕೆ ವೈ ನಂಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ತನಿಖೆಗೆ ಅನುಮತಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ನಂಜೇಗೌಡ ಸೇರಿದಂತೆ ಸಮಿತಿಯ ಇತರೆ ಮೂವರು ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವುದಕ್ಕೆ ಅರ್ಹರಲ್ಲದ ವ್ಯಕ್ತಿಗಳಿಗೆ ಹಂಚಿಕೆ ಮಾಡುವ ಮೂಲಕ ಜನ ಪ್ರತಿನಿಧಿಗಳಿಗೆ ನೀಡಿರುವ ಅಧಿಕಾರವನ್ನು ಅರ್ಜಿದಾರರು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಗಳಲ್ಲಿ ಇದು ಉದಾಹರಣೆಯಾಗಿದೆ ಎಂದು ಹೈಕೋರ್ಟ್ ತಿಳಿಸಿ, ಅರ್ಜಿ ವಜಾಗೊಳಿಸಿದೆ. ಜೊತೆಗೆ ಪ್ರಕರಣ ಸಂಬಂಧ ತನಿಖೆಗಾಗಿ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ.
ಅಲ್ಲದೆ, ಆರೋಪ ಸಂಬಂಧ ಈ ಮೊದಲೇ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅರ್ಜಿದಾರರು ಆರೋಪಿಗಳಾಗಿಲ್ಲ. ಆದ್ದರಿಂದ ಎರಡನೇ ಎಫ್‌ಐಆರ್‌ನ್ನು ರದ್ದು ಪಡಿಸುವಂತೆ ಅರ್ಜಿದಾರರ ಕೋರಿಕೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
2004ರಲ್ಲಿ ಮೃತರಾಗಿದ್ದ ನಾರಾಯಣಪ್ಪ ಎಂಬುವರಿಗೆ 2019ರಲ್ಲಿ 1.39 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಕಳೆದ 50 ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿದ್ದ ಎಂಬ ಕಾರಣ ನೀಡಿ 40 ವರ್ಷದ ಆನಂದಗೌಡ ಎಂಬ ವ್ಯಕ್ತಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಅಂಶಗಳನ್ನು ಪರಿಶೀಲಿಸಿದರೆ ಸಮಿತಿಯ ಅಧ್ಯಕ್ಷರಾಗಿದ್ದ ಅರ್ಜಿದಾರರು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಜೊತೆಗೆ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.