ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿಯ ಕುಟುಕು ಕಾರ್ಯಾಚರಣೆಗೆ ಹೈಕೋರ್ಟ್ ಸಮ್ಮತಿಸಿ, ಸಂಚಾರಿ ಪೊಲೀಸರ ವಿರುದ್ಧದ ಸ್ಟಿಂಗ್ ಆಪರೇಷನ್ ಎತ್ತಿಹಿಡಿದಿದೆ. ಜೊತೆಗೆ ಎನ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿ (ಬಿಎಸ್ಎ), ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯ ಕುಟುಕು ಕಾರ್ಯಾಚರಣೆಗಳು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿತು.
ಅಧೀನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಬೆಂಗಳೂರಿನ ಈಶಾನ್ಯ ವಲಯದ ಸಂಚಾರ ವಿಭಾಗದ ಎಸಿಪಿ ಎಂ.ಎಸ್.ಅಶೋಕ್ ಮತ್ತಿತರ ಹಲವು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಕುಟುಕು ಕಾರ್ಯಚರಣೆ ಮಾಡುವಾಗ ನಿಯಮದಂತೆ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಪಾದಕರ ತಂಡದ ಮುಖ್ಯಸ್ಥರ ಪೂರ್ವಾನುಮತಿ ಪಡೆದಿರಬೇಕು. ಸಾರ್ವಜನಿಕ ಹಿತಾಸಕ್ತಿ, ತಪ್ಪು ಬಯಲುಗೊಳಿಸುವ ಉದ್ದೇಶ ಹೊಂದಿರಬೇಕು. ಆದರೆ ಅದರಿಂದ ವ್ಯಕ್ತಿಯ ಖಾಸಗಿ ಜೀವನಕ್ಕೆ ತೊಂದರೆಯಾಗುವಂತಿರಬಾರದು. ಲಂಚ ಸ್ವೀಕರಿಸುವಂತೆ ಆಮಿಷ ಒಡ್ಡುವಂತಿರಬಾರದು. ಆದರೆ ಬೆಂಗಳೂರು ಪ್ರವೇಶಿಸಲು ಗ್ರಾನೈಟ್ ಲಾರಿಗಳಿಂದ ಲಂಚ ಸ್ವೀಕರಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರ ಮೇಲಿನ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟು ಸ್ವೀಕರಿಸಿರುವ ದೃಶ್ಯಗಳಿವೆ. ಹಾಗಾಗಿ ಸಂಚಾರಿ ಪೊಲೀಸರ ವಿರುದ್ಧದ ಕುಟುಕು ಕಾರ್ಯಚರಣೆ ಎತ್ತಿಹಿಡಿಯಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ ವಾಣಿಜ್ಯ ತೆರಿಗೆ ಅಧಿಕಾರಿಗಳೂ ಸಹ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ವಿಚಾರ ಸಾಬೀತಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ಆಧರಿಸಿ ದಾಖಲಿಸಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಲಂಡನ್ ನಂತರ ಹೆಚ್ಚಿನ ದಟ್ಟಣೆ ನಗರಿ ಬೆಂಗಳೂರು:ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು, ಲಂಡನ್ ನಗರಕ್ಕೆ ಸಮೀಪದಲ್ಲಿದೆ. ಬೆಂಗಳೂರು ಎರಡನೇ ಅತಿಹೆಚ್ಚು ದಟ್ಟಣೆಯ ನಗರಿ ಎಂದು ಹೆಸರಾಗಿದೆ. ಆದರೂ ಸಹ ಸಂಚಾರಿ ಪೊಲೀಸರು ಲಂಚ ಸ್ವೀಕರಿಸಿ ನಿರ್ಬಂಧಿತ ಅವಧಿಯಲ್ಲಿಯೂ ಲಾರಿಗಳನ್ನು ನಗರದೊಳಕ್ಕೆ ಬಿಡಲಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮತ್ತೊಂದೆಡೆ ನಗರದಲ್ಲಿ ಅಪರಾಧ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ ಎಂದು ಹೇಳಿರುವ ನ್ಯಾಯಾಲಯ, ಸರ್ಕಾರ ಈ ಸಂಚಾರ ಪೊಲೀಸರ ಭ್ರಷ್ಟಾಚಾರವನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಬೇಕು ಮತ್ತು ಇದರಿಂದ ನಾಗರಿಕರು ಮತ್ತು ಆರ್ಥಿಕತೆ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದೆ.
ಇದನ್ನೂ ಓದಿ: ನೋಂದಾಯಿತ ದಾಖಲೆ ರದ್ದು ಮಾಡುವ ಅಧಿಕಾರ ಸಬ್ ರಿಜಿಸ್ಟ್ರಾರ್ಗೆ ಇಲ್ಲ: ಹೈಕೋರ್ಟ್