ಬೆಂಗಳೂರು: ನೂತನವಾಗಿ 840 ಬಸ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯಾದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಹೈಕೋರ್ಟ್ ಸೂಚಿಸಿದೆ. ಹೊಸ ಬಸ್‌ಗಳ ಖರೀದಿಗೆ ಬಿಬಿಎಂಟಿಸಿ ಹೊರಡಿಸಿದ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ವಿಶೇಷಚೇತನ ಸುನೀಲ್ ಕುಮಾರ್ ಜೈನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಬಿಎಂಟಿಸಿ ಪರ ವಾದ ಮಂಡಿಸಿದ ವಕೀಲರು, ಖರೀದಿಸಲು ಉದ್ದೇಶಿಸಿರುವ ಬಸ್‌ಗಳು ದಿವ್ಯಾಂಗ ಸ್ನೇಹಿಯಾಗಿಲ್ಲ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ. ಆದರೆ, ಬಸ್‌ನಲ್ಲಿ ದಿವ್ಯಾಂಗರ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಬಸ್‌ನಲ್ಲಿ ದಿವ್ಯಾಂಗರಿಗೆ ನಾಲ್ಕು (ಮಹಿಳೆ/ಪುರುಷರಿಗೆ ತಲಾ ಎರಡು) ಸೀಟು ಮೀಸಲಿರಿಸಲಾಗಿದೆ. ಕಾರ್ಯಚರಣೆಯಲ್ಲಿರುವ ಬಿಎಂಟಿಸಿ ಬಸ್‌ಗಳ ಪೈಕಿ ಶೇ.21ರಷ್ಟು ಬಸ್‌ಗಳಲ್ಲಿ ಗಾಲಿಕುರ್ಚಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ಹೊಸ ಬಸ್‌ಗಳು ಗಾಲಿಕುರ್ಚಿ ಪ್ರಯಾಣಿಕರ ಸ್ನೇಹಿಯಾಗಿವೆ ಎಂಬುದು ಬಿಎಂಟಿಸಿ ಸಲ್ಲಿಸಿರುವ ಫೋಟೋಗಳಿಂದ ತಿಳಿದು ಬರುತ್ತದೆ. ದಿವ್ಯಾಂಗರ ಪ್ರಯಾಣಕ್ಕೆ ಅನುಕೂಲಕರವಾದ ಸೌಲಭ್ಯಗಳನ್ನು ಕಲ್ಪಿಸಲು ಬಿಎಂಟಿಸಿ ವಿವಿಧ ಕ್ರಮ ಅನುಸರಿಸಲಾಗುತ್ತಿದೆ. ಅರ್ಜಿದಾರರು ಬಯಸಿದಂತೆ ಒಂದೇ ಬಾರಿಗೆ ಎಲ್ಲಾ ಕ್ರಮ ಕೈಗೊಳ್ಳಬೇಕೆಂದು ನಿರೀಕ್ಷಿಸಲು ಅಸಾಧ್ಯ. ಆದ್ದರಿಂದ ಹಂತ-ಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಬಿಎಂಟಿಸಿಗೆ ಸ್ವಲ್ಪ ಸಮಯ ನೀಡಬೇಕು ಎಂದು ತಿಳಿಸಿ ಹೊಸ ಬಸ್‌ಗಳ ಖರೀದಿಗೆ ಕಾರ್ಯಾದೇಶ ಹೊರಡಿಸಲು ಅನುಮತಿ ನೀಡಿ ಆದೇಶಿಸಿತು.