ಬೆಂಗಳೂರು: ಬದಲಾಗುವ ಕಾಲಘಟ್ಟ ಮತ್ತು ಜೀವನ ಶೈಲಿಯ ಆಧಾರಗಳಲ್ಲಿ ವಿಚ್ಛೇದಿತ ಮಹಿಳೆಗೆ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ಅವಕಾಶವಿದೆ ಎಂದು ಹೈಕೋರ್ಟ್ ತಿಳಿಸಿದೆ. ಹೆಚ್ಚುವರಿ ಜೀವನಾಂಶ ಪರಿಹಾರ ಕೊಡಿಸುವಂತೆ ಕೋರಿ ಶೈಲಜಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಪತಿಗೆ ಸಂಪಾದನೆ ಪ್ರಮಾಣ ಹೆಚ್ಚಳವಾಗಿದೆ ಎಂಬ ಕಾರಣದಿಂದ ಜೀವನಾಂಶ ಹೆಚ್ಚಳ ಮಾಡಬೇಕು ಎಂದು ಕೋರುವ ಹಕ್ಕು ಪತ್ನಿಗೆ ಬರುವುದಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಶೈಲಜಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿಯನ್ನು ಪುರಸ್ಕರಿಸಿದೆ. ಅಲ್ಲದೆ, 2016ರಲ್ಲಿ ಅರ್ಜಿದಾರರಿಗೆ ನೀಡಲಾಗಿದ್ದ 10 ಸಾವಿರ ರು.ಗಳನ್ನು 20 ಸಾವಿರ ರು.ಗಳಿಗೆ ಹೆಚ್ಚಳ ಮಾಡಿ ಎಂದು ಆದೇಶಿಸಿದೆ. ಅಲ್ಲದೆ, ಬದಲಾದ ಸನ್ನಿವೇಶದಲ್ಲಿ ಪತ್ನಿಯಾದವಳು ತನ್ನ ಜೀವನ ಶೈಲಿ ಜೀವನ ವಿಧಾನದ ಕುರಿತು ವಿವರಿಸಲೇ ಬೇಕು ಎಂದಿಲ್ಲ. ಹೀಗಾಗಿ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ವಿಶೇಷ ಹಿಂದೂ ಕಾಯಿದೆಯಡಿ ನ್ಯಾಯಾಲಯಕ್ಕೆ ಅವಕಾಶವಿದೆ ಎಂದು ತಿಳಿಸಿದೆ.