ಬೆಂಗಳೂರು:ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ದಿನನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆಯ ಕಿರಿಕಿರಿ ತಪ್ಪಿಸುವ ಸಲುವಾಗಿ ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಕುರಿತಂತೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಸರ್ಕಾರೇತರ ಸಂಘ ಸಂಸ್ಥೆ ಸಮರ್ಪಣಾ ಸಾಮಾಜಿಕ- ಸಾಂಸ್ಕೃತಿಕ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಶಾಲೆಗಳು, ಕೈಗಾರಿಕೆಗಳು, ಫ್ಯಾಕ್ಟರಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸಂಬಂಧಿಸಿದ ಪಾಲುದಾರರ ಸಭೆ ಕರೆದು ಚರ್ಚೆ ನಡೆಸುವಂತೆ ನ್ಯಾಯಾಲಯ ತಿಳಿಸಿದೆ. ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೂಲಕ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಶಾಲಾ ಬಸ್ ಆಪರೇಟರ್‌ಗಳು, ಪೋಷಕರ ಸಂಘಗಳು ಸೇರಿ ಸಂಬಂಧಿಸಿದ ಎಲ್ಲರ ಸಭೆ ಕರೆದು ವಾಹನ ದಟ್ಟಣೆ ತಗ್ಗಿಸಲು ಶಾಲಾ ಸಮಯ ಬದಲಾವಣೆ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು ಎಂದು ನಿರ್ದೇಶಿಸಿದೆ.
ಶಾಲಾ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯನ್ನೂ ಪರಿಗಣಿಸಬೇಕಾಗುತ್ತದೆ. ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೂಲಕ ಎಲ್ಲ ಕೈಗಾರಿಕೆಗಳ ಒಕ್ಕೂಟಗಳು, ಫ್ಯಾಕ್ಟರಿಗಳು, ಕಾರ್ಮಿಕ ಸಂಘಟನೆಗಳು, ಚೇಂಬರ್ ಆಫ್ ಕಾರ್ಮಸ್, ಕಂಪನಿಗಳ ಪ್ರತಿನಿಗಳ ಜತೆ ಚರ್ಚೆ ನಡೆಸಿ ಕೆಲಸದ ಸಮಯವನ್ನು ಬದಲಾವಣೆ ಮಾಡಬಹುದು.