ಬೆಂಗಳೂರು:ಲೈಂಗಿಕ ಅಪರಾಧಗಳಿಂದ ಅಪ್ರಾಪ್ತ ಮಕ್ಕಳ ರಕ್ಷಣೆ (ಪೊಕ್ಸೊ)ಕಾಯಿದೆ ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ನ್ಯಾಯಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಪೀಠಾಧಿಪತಿ, ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯರ ಪರ ಸಲ್ಲಿಕೆಯಾಗಿರುವ ಆಕ್ಷೇಪಣೆ ಕುರಿತ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ.
ಮುರುಘಾ ಶರಣರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸಂತ್ರಸ್ಥೆಯ ಪರವಾಗಿ ಮಣಿ ಎಂಬುವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿರುವ ಶರಣರ ಪರ ವಕೀಲರು, ಸಂತ್ರಸ್ತ ಬಾಲಕಿಗೆ ತಂದೆ, ತಾಯಿಯವರು ಆಕ್ಷೇಪಣೆ ಸಲ್ಲಿಸಬೇಕು. ಆದರೆ, ಮಣಿ ಹೆಸರಿನವರು ಆಕ್ಷೇಪಣೆ ಸಲ್ಲಿಸಿದ್ದು, ಇದನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು.