ಬೆಂಗಳೂರು: ಕೊಲೆ ಪ್ರಕರಣವೊಂದಲ್ಲಿ ಸಾಕ್ಷಿಗಳ ಹೇಳಿಕೆಗಳು ಸಂಶಯಾಸ್ಪಾದದಿಂದ ಕೂಡಿದ್ದು, ಸಾಕ್ಷಿಗಳನ್ನು ದೃಢೀಕರಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ವ್ಯಕ್ತಿಗಳನ್ನು ಆರೋಪ ಮುಕ್ತಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಕೊಡಗಿನ ವಿರಾಜಪೇಟೆಯ ಪುಷ್ಪೇಶ್ ಮತ್ತು ಕೆ.ಆರ್.ರದೀಶ್ ಮತ್ತು ಪಿರಿಯಾಪಟ್ಟಣದ ಪಿ.ವಿ.ವಿನಯ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ಕೆ.ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೇ ವೇಳೆ ವಜಾಗೊಳಿಸಿ ಆದೇಶಿಸಿದೆ.
ಕ್ರಿಮಿನಲ್ ಪ್ರಕರಣಗಳ ನ್ಯಾಯದಾನ ಜಾಲದಲ್ಲಿ ಬರುವ ಎಳೆಯಲ್ಲಿ ಪ್ರಕರಣದಲ್ಲಿ ಆಧರಿಸಿರುವ ಸಾಕ್ಷಿಗೆ ಸಂಬಂಧಿಸಿದಂತೆ ಎರಡು ದೃಷ್ಟಿಕೋನ ಕಂಡುಬಂದರೆ ಒಂದು ಆರೋಪಿ ಎಸಗಿದ್ದಾನೆ ಎನ್ನಲಾದ ಕೃತ್ಯ ಮತ್ತು ಇನ್ನೊಂದು ಅವರ ಮುಗ್ಧತೆಗೆ ಸಂಬಂಧಿಸಿದ್ದಾಗಿರುತ್ತದೆ. ಇಲ್ಲಿ ಆರೋಪಿಗಳಿಗೆ ಅನುಕೂಲಕರವಾದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಕೊಲೆ ಆರೋಪಿ ಪುಷ್ಪೇಶ್, ವಿನಯ್, ಸಂಪತ್ ಮತ್ತು ರಮೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರು ಮತ್ತು ಎಫ್‌ಐಆರ್‌ನಲ್ಲಿನ ವ್ಯತ್ಯಾಸಗಳ ಕುರಿತು ತನಿಖೆ ಅಥವಾ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ವಿವರಿಸಿಲ್ಲ. ತನಿಖಾಧಿಕಾರಿಯು ಮೂವರು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ನಾಲ್ಕನೇ ಆರೋಪಿ ಸಂಪತ್ ಕುಮಾರ್ ಅವರ ಹೆಸರನ್ನು ಕೈಬಿಟ್ಟಿದ್ದರು. ದೂರನ್ನು ತಮ್ಮ ವಕೀಲ ಸುನೀಲ್ ಎಂಬುವವರು ಬರೆದಿದ್ದು, ಅದನ್ನು ಪರಿಶೀಲಿಸಿಲ್ಲ ಎನ್ನುವ ಮೂಲಕ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿರುವ ದೂರುದಾರರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆರೋಪಿಗಳನ್ನು ಖುಲಾಸೆ ಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ? 2014ರ ಏಪ್ರಿಲ್ 17ರಂದು ನೌಶೀರ್ ಎಂಬುವರು ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕೊಡಗಿನ ವಿರಾಜಪೇಟೆಯ ಪುಷ್ಪೇಶ್ ಮತ್ತು ಕೆ ಆರ್ ರದೀಶ್ ಮತ್ತು ಪಿರಿಯಾಪಟ್ಟಣದ ಪಿ ವಿ ವಿನಯ ಅವರು ಬಳಿ ಕೊಚ್ಚಿ ಕೊಲೆ ಮಾಡಿದ್ದರು. ನೌಶೀರ್ ಓಡಾಟದ ಬಗ್ಗೆ ಪುಷ್ಪೇಶ್ ಮತ್ತು ವಿನಯ ಅವರಿಗೆ ರದೀಶ್ ಮಾಹಿತಿ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ನೆಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ಗಳಾದ 302, 109, 120(ಬಿ), 341 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಕೊಡಗಿನ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:High court: ಸಬ್ ರಿಜಿಸ್ಟ್ರಾರ್ ಕಚೇರಿ ಅವ್ಯವಸ್ಥೆ ಸರಿಪಡಿಸಲು ಅಗತ್ಯ ಕ್ರಮ- ಸರ್ಕಾರ