ಬೆಂಗಳೂರು: ಜಿಂದಾಲ್ ಸೌತ್‌ವೆಸ್ಟ್ ಬೆಂಗಳೂರು ಫುಟ್ಬಾಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಂಠೀರವ ಕ್ರೀಡಾಂಗಣದಲ್ಲಿ ಪುಟ್ಬಾಲ್ ಪಂದ್ಯಗಳನ್ನು ನಡೆಸಲು ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಸಿದ್ದ ಕ್ರೀಡಾಪಟು ಅಶ್ವಿನಿ ನಾಚಪ್ಪ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ತರಬೇತುದಾರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಖಾಸಗಿ ಕಂಪನಿಗೆ ಪಂದ್ಯಾವಳಿ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದರು.
ಈ ಅರ್ಜಿ ವಿಚಾರಣೆ ಇಂದು ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಾಲಯವು, ಕಂಠೀರವ ಕ್ರೀಡಾಂಗಣವು ಸರ್ಕಾರದ ಆಸ್ತಿ. ಖಾಸಗಿ ಕಂಪನಿಗಳಿಗೆ ಬಳಕೆ ಮಾಡಲು ಹೇಗೆ ಅನುಮತಿ ಕೊಟ್ಟಿದ್ದಿರಿ ಎಂದು ಪ್ರಶ್ನಿಸಿತು. ಯಾವುದೇ ನಿಯಮ ಪಾಲಿಸದೆ, ಹೇಗೆ ಖಾಸಗಿ ಕಂಪನಿಗೆ ಒಪ್ಪಿಗೆ ನೀಡಿದ್ದೀರಾ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿತು.
ಈ ವೇಳೆ ಜಿಂದಾಲ್ ಕಂಪನಿ ಪರ ವಕೀಲರು ಪ್ರಶ್ನೆಗೆ ಉತ್ತರಿಸಿ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಸಿಂಥೆಟಿಕ್ ಟ್ರಾಕ್ ಸೇರಿದಂತೆ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲು ಜಿಂದಾಲ್ ಕಂಪನಿ 6 ಕೋಟಿ ಖರ್ಚು ಮಾಡಿದೆ. ಫುಟ್ಬಾಲ್ ಪಂದ್ಯಾವಳಿ ವೇಳೆ ಹೊರತುಪಡಿಸಿ ಉಳಿದ ಸಮಯದಲ್ಲಿ ಯಾವುದೇ ಕ್ರೀಡಾಪಟುವಾದರೂ ಕ್ರೀಡಾಂಗಣವನ್ನು ಬಳಸಬಹುದು. ಹಾಗೆ ಕ್ರೀಡಾಂಗಣ ಬಳಕೆಗೆ ಜಿಂದಾಲ್ ಕಂಪನಿ ಸರ್ಕಾರಕ್ಕೆ ಹಣ ಪಾವತಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಪೀಠ ಕ್ರೀಡಾಂಗಣ ಸರ್ಕಾರದ ಆಸ್ತಿ. ಕಾನೂನು ಪ್ರಕ್ರಿಯೆಯನ್ನು ಪಾಲಿಸದೇ ಕ್ರೀಡಾಂಗಣವನ್ನು ಖಾಸಗಿ ಕಂಪನಿಗಳು ಬಳಸುವುದಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಎಂದು ಹೇಳಿತು.ಇದಕ್ಕೆ ಪ್ರತಿ ವಾದಿಸಿದ ಜಿಂದಾಲ್ ಪರ ವಕೀಲರು ಕ್ರೀಡಾಂಗಣವನ್ನು ಖಾಸಗಿಯವರಿಗೆ ತಾತ್ಕಾಲಿಕವಾಗಿ ಕೆಲ ದಿನಗಳ ಮಟ್ಟಿಗೆ ನೀಡಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಅನೇಕ ತೀರ್ಪುಗಳನ್ನು ಉದಾಹರಿಸಿದರು. ನಂತರ ಹೈಕೋರ್ಟ್ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.