ಬೆಂಗಳೂರು: ರಾಜ್ಯದ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರ ಹೆಗಲ ಮೇಲೆ ಹಾಕಿದೆ ಎಂಬ ಮಾಹಿತಿ ಸಿಕ್ಕಿದೆ.
ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಎಲ್ಲ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳಾಗಬೇಕು? ಚುನಾವಣೆಯನ್ನು ಗೆಲ್ಲಲು ರಣತಂತ್ರ ಹೇಗಿರಬೇಕು? ಎನ್ನುವುದನ್ನು ಯಡಿಯೂರಪ್ಪನವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್ ಬಯಕೆಯಾಗಿದೆ.
ಬಿಎಸ್‌ವೈ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿರಲು ನಿರ್ಧರಿಸಿರುವ ಕೇಂದ್ರ ನಾಯಕರು, ಮಂತ್ರಿ ಮಂಡಲ ರಚನೆಯ ನಂತರ ಸರ್ಕಾರದ ಯಾವ ಚಟುವಟಿಕೆಗಳ ವಿಷಯದಲ್ಲೂ ಮಧ್ಯೆ ಪ್ರವೇಶಿಸುತ್ತಿಲ್ಲ.
ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲಿ ದಾಖಲೆಯ ಪ್ರಮಾಣದಷ್ಟು ಸರ್ಕಾರಿ ನೌಕರರ ವರ್ಗಾವಣೆ ನಡೆದಿದೆ. ಆದ್ರೂ ಚಕಾರ ಎತ್ತದ ಹೈಕಮಾಂಡ್ ಇದೀಗ ಉಪಚುನಾವಣೆಯ ಸಂಪೂರ್ಣ ಹೊಣೆಯನ್ನೂ ಯಡಿಯೂರಪ್ಪನವರಿಗೆ ನೀಡಿದೆ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಅಂತಿಮ ನಿರ್ಧಾರ ಕೈಗೊಳ್ಳಲಿ. ಚುನಾವಣೆ ನಂತರದ ಸಮಸ್ಯೆಗಳಿಗೆ ಹೈಕಮಾಂಡ್ ದೂರದಿರಲಿ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.