ಕರ್ನಾಟಕ

karnataka

By

Published : Nov 3, 2022, 1:05 PM IST

ETV Bharat / state

ಟಿಕೆಟ್ ನಿರ್ಧಾರ ಹೈಕಮಾಂಡ್ ಮಾಡಲಿದೆ: ಪಕ್ಷ ಸೇರಿದವರಿಗೆ ವೇದಿಕೆಯಲ್ಲೇ ಸಂದೇಶ ನೀಡಿದ ಸಿಎಂ

ಟಿಕೆಟ್​ ನೀಡುವ ಕುರಿತು ನಾನು ಅಥವಾ ಯಾರೋ ಒಬ್ಬರು ನಿರ್ಧರಿಸುವುದಲ್ಲ. ಪಕ್ಷದ ಹೈಕಮಾಂಡ್​ ನಿರ್ಧಾರಕ್ಕೆ ನಾನು ಸೇರಿದಂತೆ ಎಲ್ಲರೂ ಬದ್ಧರಾಗಿರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಕಿವಿಮಾತು ಹೇಳಿದ್ದಾರೆ.

Congress and JDS leaders joined BJP
ಬಿಜೆಪಿ ಸೇರಿದ ಕಾಂಗ್ರೆಸ್​ ಜೆಡಿಎಸ್​ ನಾಯಕರು

ಬೆಂಗಳೂರು: ಈಗ ರಾಜ್ಯದಲ್ಲಿ ರಾಜಕೀಯ ಸಮೀಕರಣ ಆಗುತ್ತಿದೆ. ಎಲ್ಲ ವರ್ಗದ ಜನ ಬಿಜೆಪಿಗೆ ಬರುತ್ತಿದ್ದಾರೆ. ಅವರೆಲ್ಲಾ ನಮ್ಮವರೇ, ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ಬಂದ ನಾಯಕರಿಗೆ ಸ್ಥಾನಮಾನ ಕೊಡುವ ಬಗ್ಗೆ ಯಾರೋ ಒಬ್ಬರು ತೀರ್ಮಾನ ಮಾಡಲ್ಲ. ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿಯೇ ಟಿಕೆಟ್‌ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ‌ ಸ್ಪಷ್ಟ ಸಂದೇಶ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಟ ಶಶಿಕುಮಾರ್, ಮಾಜಿ ಸಂಸದ ಮುದ್ದಹನುಮೇಗೌಡ ಹಾಗು ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸೇರಿದಂತೆ ಹಲವು ನಾಯಕರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ನಳಿನ್ ಕುಮಾರ್ ಕಟೀಲ್ ಪಕ್ಷಕ್ಕೆ ಬರಮಾಡಿಕೊಂಡರು. ಪಾರ್ಲಿಮೆಂಟರಿ ಬೋರ್ಡ್ ಇದೆ. ನನ್ನನ್ನು ಸೇರಿದಂತೆ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ದವಾಗಿರಬೇಕು. ನೀವೆಲ್ಲಾ ಪಕ್ಷದ ತೀರ್ಮಾನಕ್ಕೆ ಬದ್ಧ ಆಗಿರುತ್ತೀರಿ ಎಂದು ನಂಬಿದ್ದೇನೆ. ಟಿಕೆಟ್ ಅಂತಿಮ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ವೇದಿಕೆ ಮೇಲೆ ಹೇಳಿದ ಸಿಎಂ, ನಾವು ನಿಮ್ಮನ್ನು ಉತ್ತಮವಾಗಿ ನಡೆಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ, ರಾಜ್ಯದ ರಾಜಕಾರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಳೆದ 10 ವರ್ಷದಲ್ಲಿ ಚರ್ವಿತ ಚರಣ ಆಗಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಿಶ್ವಾಸ ಉಳಿಸಿಕೊಳ್ಳಲು ವಿಫಲವಾಗಿ ಅಧಿಕಾರ ಕಳೆದುಕೊಂಡಿತ್ತು. 120 ಸ್ಥಾನದಿಂದ 79ಕ್ಕೆ ಇಳಿದಿತ್ತು. ಅವರ ಸಚಿವರನೇಕರು ಸೋತಿದ್ದರು. ಜೆಡಿಎಸ್ ಜೊತೆ ಸರ್ಕಾರ ರಚಿಸಿ, ಆದರೂ ಹಿಂಬಾಗಿಲಿನಿಂದ ಅಧಿಕಾರ ಹಿಡಿದರು. ಆದರೆ ಆ ಪ್ರಯೋಗವು ವಿಫಲವಾಯಿತು‌.

ಕೋವಿಡ್ ಸಮಯದಲ್ಲಿ ಮತ್ತು ನಂತರ ಬಿಜೆಪಿ ಜನಪರ ಕಾರ್ಯಕ್ರಮದ ಮೂಲಕ ಜನರಿಗೆ ಹತ್ತಿರವಾಗುತ್ತಿದೆ. ನಮಗೆ ಸಂಪೂರ್ಣ ದಿಕ್ಸೂಚಿ ಕಾಣುತ್ತಿದೆ. ಜನಸಂಕಲ್ಪ ಯಾತ್ರೆ ಉತ್ತರ ಕರ್ನಾಟಕದಲ್ಲಿ ನಡೆದಿದ್ದು, ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ. ಜನರ ಉತ್ಸಾಹ ದೊಡ್ಡ ಅಲೆಯಾಗಿ ಪರಿವರ್ತನೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹತ್ತು ಹಲವು ನಾಯಕರು ಅವರ ಸೇವೆ ಸಜ್ಜನಿಕೆಗೆ ಬೆಲೆ ಸಿಗಲ್ಲ ಎಂದು ಖಾತ್ರಿಯಾದ ನಂತರ ಡಬ್ಬಲ್ ಇಂಜಿನ್ ಸರ್ಕಾರ ಕರ್ನಾಟಕದ ಪ್ರಗತಿಗೆ ಕಂಕಣಬದ್ದವಾಗಿ ಕೆಲಸ ಮಾಡುವ ವಿಶ್ವಾಸದೊಂದಿಗೆ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬಿಜೆಪಿ ಸೇರುತ್ತಿದ್ದಾರೆ ಎಂದರು.

ಮುದ್ದಹನುಮೇಗೌಡ ಶಾಸಕ, ಸಂಸದರಾಗಿ ಕೆಲಸ ಮಾಡಿ ತಮ್ಮದೇ ಆದ ಗುರುತು ಇರಿಸಿಕೊಂಡವರು. ಸಜ್ಜನ ರಾಜಕಾರಣ ಜನಪರ ದನಿ ಎತ್ತುವ ಸಮರ್ಥ ರಾಜಕಾರಣಿಯಾಗಿ ನಮ್ಮ ಪಕ್ಷ ಸೇರಿದ್ದು, ಅವರ ಸೇರ್ಪಡೆಯಿಂದ ನಮಗೆ ಬಹಳ ದೊಡ್ಡ ಬಲ ಬಂದಿದೆ‌. ನಟ ಶಶಿಕುಮಾರ್ ಮರಳಿ ಮನೆಗೆ ಬಂದಿದ್ದಾರೆ. ಅವರಿಗೆ ಈಗ ಮನವರಿಕೆಯಾಗಿದೆ ಹಾಗಾಗಿ ನಮ್ಮ ಮನೆಗೆ ಬಂದಿದ್ದಾರೆ. ದೊಡ್ಡ ಅಭಿಮಾನಿಗಳ ತಂಡವೂ ಅವರಿಗೆ ಇದೆ. ಅವರು ಎಸ್ಟಿ ಸಮುದಾಯಕ್ಕೆ ಸೇರಿದ್ದು, ಅವರ ಸೇರ್ಪಡೆಯಿಂದಲೂ ಪಕ್ಷಕ್ಕೆ ಬಹಳ ಶಕ್ತಿ ಬಂದಿದೆ. ಸೇವಾದಳದ ಹನುಮಂತರಾವ್ ಬಂದಿದ್ದಾರೆ. ಅಲ್ಲಿ ಸೇವೆ ಮಾಡಲು ಆಗಲ್ಲ, ಸೇವೆ ಮಾಡಿದವರನ್ನು ಗುರುತಿಸಲ್ಲ ಎಂದು ಬಿಜೆಪಿಗೆ ಬಂದಿದ್ದಾರೆ ಅವರ ಸೇವೆ ನಾವು ಪಡೆಯಲಿದ್ದೇವೆ ಎಂದರು.

ಹೊಂದಿಕೊಂಡು ಹೋಗುತ್ತೇನೆ:ಮುದ್ದಹನುಮೇಗೌಡ ಮಾತನಾಡಿ, ಬಿಜೆಪಿ ಪ್ರಮುಖರು, ಸಚಿವರ ಜೊತೆ ನಾನು ಕೆಲಸ ಮಾಡಿದ್ದೇನೆ. ತುಮಕೂರಿನ ಕಾರ್ಯಕರ್ತರ ಜೊತೆಗೂ ನನಗೆ ನಿಕಟ ಸಂಬಂಧ ಇತ್ತು. ಈ ಪಕ್ಷದಲ್ಲಿ ಕಾರ್ಯಕರ್ತನಾಗಿ ಸುಲಲಿತವಾಗಿ ಕೆಲಸ ಮಾಡುವ ವಿಶ್ವಾಸ ಇದೆ. ಅತ್ಯಂತ ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡಿದ್ದಾರೆ. ಪ್ರಧಾನಿಗಳ ಕಾರ್ಯವೈಖರಿಯನ್ನು ನಾನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಅವರ ನೇತೃತ್ವದಲ್ಲಿ ಕೇಂದ್ರ ಹಾಗೂ ಬೊಮ್ಮಾಯಿ ನೇತೃತ್ವದ ಜನಪರ ಯೋಜನೆಗಳು ನನಗೆ ಮೆಚ್ಚುವಂತಾಗಿದೆ. ಭಾರತದ ಘನತೆಯನ್ನು ಪ್ರಪಂಚದಲ್ಲಿ ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ. ನನಗೆ ಬಹಳ ವಿಶ್ವಾಸ ಇದೆ. ಈ ಪಕ್ಷದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇನೆ. ಎಲ್ಲ ನೀತಿ ನಿಯಮ ಸಿದ್ದಾಂತವನ್ನು ನಾನು ಬಲ್ಲೆ, ಪಕ್ಷದ ಶಕ್ತಿಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಸ್ವಲ್ಪವೂ ಪ್ರಸ್ತಾಪಿಸದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಹೊಗಳಿದರು.

ಕಾರ್ಯಕರ್ತನಾಗಿ ಕೆಲಸ:ಬಿಜೆಪಿ ನನಗೆ ಹೊಸದಲ್ಲ, ನಾನು ಜೆಡಿಯುನಿಂದ ಗೆದ್ದು ಎನ್​ಡಿಎ ಭಾಗವಾಗಿದ್ದೆ. ವಾಜಪೇಯಿ ಕಾಲದಲ್ಲಿ ಸಂಸದನಾಗಿದ್ದೆ, ಕೆಲವೊಂದು ಏಳುಬೀಳು ಆಗುತ್ತದೆ. ಜೀವನದಲ್ಲಿ ಕೆಲವೊಂದು ಸುರಳಿಯಾಗುತ್ತದೆ. ಕೆಲವೊಂದು ಆಸೆ, ನೀರಿಕ್ಷೆಗಳಿಂದ ಕೆಲವೊಂದು ತಪ್ಪುಗಳಾಗುತ್ತದೆ. ಅದಕ್ಕೆ ನಾನು ಹೊರತಲ್ಲ, ಇಂದು ಮೋದಿ ಕಾರ್ಯವೈಖರಿ, ಬೊಮ್ಮಾಯಿ‌ ಕಾರ್ಯ, ಬಿಜೆಪಿ ಒಟ್ಟಾಗಿ ಮಾಡುತ್ತಿರುವ ಕಾರ್ಯ ನೋಡಿ ನಾನು ಬಿಜೆಪಿ ಸೇರಿದ್ದೇನೆ. ಇಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದೇನೆ. ನಾನು ಎಸ್ಟಿ ಆಗಿದ್ದರೂ ನಾನು ನಟ, ಎಲ್ಲ ಜಾತಿ, ವರ್ಗದಲ್ಲೂ ಅಭಿಮಾನಿಗಳಿದ್ದಾರೆ. ನಾನು ಪಕ್ಷದಲ್ಲಿ ಕೆಲಸ ಮಾಡಲಿದ್ದೇನೆ, ಪಕ್ಷಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದ ಎಂದರು.

ಕಾಂಗ್ರೆಸ್ ಬಾಗಿಲು ಮುಚ್ಚಲಿದೆ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಇದೊಂದು ಸಂದೇಶ, 15 ದಿನ ಕಾದು ನೋಡಿ ಕಾಂಗ್ರೆಸ್ ನಾಯಕರು ಬಾಗಿಲು ಮುಚ್ಚಿಕೊಂಡು ಬಿಜೆಪಿಗೆ ಬರುತ್ತಾರೆ. ರಾಹುಲ್ ಗಾಂಧಿಯವರು ಭಾರತ್ ಜೋಡೊ ಮಾಡಿದ್ದಾರೆ. ಅವರು ಚಾಮರಾಜನಗರಕ್ಕೆ ಕಾಲಿಟ್ಟರು, ಕೊಳ್ಳೆಗಾಲ ನಗರಸಭೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿದೆ. ಕಾಂಗ್ರೆಸ್ ತನ್ನ ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.

ಮುದ್ದಹನುಮೇಗೌಡ್ರು, ಶಶಿಕುಮಾರ್ ಅವರೆ ನೀವು ವಿಶ್ವಾಸ ಇಡಬೇಕು. ಬಿಜೆಪಿ ಪಕ್ಷ ಬಂದವರಿಗೆ ಎಂದಿಗೂ ನಿರಾಸೆ ಮೂಡಿಸಿಲ್ಲ. ಬಿಜೆಪಿಗೆ ಬಂದವರೆಲ್ಲ ನಾಯಕರಾಗಿದ್ದಾರೆ. ಪಕ್ಷಕ್ಕೆ ಬಂದವರು ನಿಷ್ಟರಾಗಿರಬೇಕು ಅಷ್ಟೇ. ಬಿಜೆಪಿಯ ಹಾಲಿಗೆ ನೀವು ಸಕ್ಕರೆಯಾಗಿ ಬಂದಿದ್ದೀರಿ. ಪಕ್ಷಕ್ಕೆ ನೀವು ಸಿಹಿಯನ್ನು ಕೊಡಬೇಕು. ಮುಂದೆ ಗೌರವ ಸ್ಥಾನಮಾನ, ನಿಮ್ಮ ಇಚ್ಛೆಯ ಅವಕಾಶ ಕೊಡಲಿದೆ ಎಂದರು.

2014-19 ರವರೆಗೆ ನಾನು ಮುದ್ದಹನುಮೇಗೌಡ ಸಂಸದರಾಗಿ ಕೆಲಸ ಮಾಡಿದ್ದೆವು. ಆಗಲೇ ನಾನು ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಕರೆದಿದ್ದೆ, ಆದರೆ ಅವಾಗ ಅವರು ಬಂದಿರಲಿಲ್ಲ, ಕೊನೆಗೆ ಅವರನ್ನು ಕಾಂಗ್ರೆಸ್ ಟಿಕೆಟ್ ನೀಡದೆ ಹೊರಗೆ ಹಾಕಿತು. ಇವಾಗಲಾದರೂ ಮುದ್ದಹನುಮೇ ಗೌಡರಿಗೆ ಕಾಂಗ್ರೆಸ್ ಬಣ್ಣ ಏನೆಂದು ಗೊತ್ತಾಯ್ತಲ್ಲ ಎಂದರು.

ಇದನ್ನೂ ಓದಿ:ಬಿಜೆಪಿ ಸೇರಿದ ನಟ ಶಶಿಕುಮಾರ್, ಮಾಜಿ ಸಂಸದ ಮುದ್ದಹನುಮೇಗೌಡ

ABOUT THE AUTHOR

...view details