ಬೆಂಗಳೂರು: ಹೈಕಮಾಂಡ್ ಆಹ್ವಾನದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಬುಲಾವ್ ಮೇರೆಗೆ ಸಿದ್ದರಾಮಯ್ಯ ತೆರಳುತ್ತಿದ್ದಾರೆ. ಇಲ್ಲಿ ಮಂಗಳವಾರ ಬೆಳಗ್ಗೆ ಹೈಕಮಾಂಡ್ ಮಟ್ಟದ ಹಿರಿಯ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸಲಿದ್ದಾರೆ. ರಾತ್ರಿ ಅವರು ಬೆಂಗಳೂರಿಗೆ ವಾಪಸಾಗುವ ಕಾರ್ಯಕ್ರಮವಿದೆ.
ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಇವರ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಸಫಲರಾಗಿದ್ದಾರೆ. ರಾಜೀನಾಮೆಯನ್ನು ಹಿಂಪಡೆಯುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂದಿ ಕೂಡ ಸೂಚಿಸಿದ್ದಾರೆ. ಅಲ್ಲದೇ ಈ ಕುರಿತು ಮಾತುಕತೆಗೆ ಆಗಮಿಸುವಂತೆ ಬುಲಾವ್ ಕೊಟ್ಟಿದ್ದಾರೆ. ಆರೋಗ್ಯ ಸುಧಾರಿಸಿಕೊಂಡು ದಿಲ್ಲಿಗೆ ಬನ್ನಿ ಎಂದು ಸೋನಿಯಾ ಗಾಂಧಿ ಸೂಚಿಸಿದ್ದರು. ಈ ಹಿನ್ನೆಲೆ ಸಿದ್ದರಾಮಯ್ಯ ನಾಳೆ ದಿಲ್ಲಿಗೆ ತೆರಳುತ್ತಿದ್ದಾರೆ.
ತಮ್ಮ ಶಾಸಕಾಂಗ ಪಕ್ಷದ ರಾಜೀನಾಮೆ ಹಿಂಪಡೆಯಲಿರುವ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಹಾಗೂ ಇತರೆ ನಾಯಕರ ಜತೆ ಸಮಾಲೋಚಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಯಾರು ಸೂಕ್ತ ಎನ್ನುವ ಸಲಹೆ ಕೂಡ ನೀಡಿ ವಾಪಾಸಾಗಲಿದ್ದಾರೆ.