ಬೆಂಗಳೂರು: ಕೇರಳದ ಕಾಸರಗೋಡು ಮತ್ತು ರಾಜ್ಯದ ದಕ್ಷಿಣ ಕನ್ನಡದ ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ರಸ್ತೆ ಸಂಚಾರಕ್ಕಿದ್ದ ಸಮಸ್ಯೆಯನ್ನು ಹೈಕೋರ್ಟ್ ಇತ್ಯರ್ಥಪಡಿಸಿ ಆದೇಶಿಸಿದೆ.
ಗಡಿ ರಸ್ತೆಯಲ್ಲಿರುವ ಚೆಕ್ ಪೋಸ್ಟ್ ಮೂಲಕ ಸಂಚರಿಸಲು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕೇರಳದ ಮಂಜೇಶ್ವರ ತಾಲೂಕಿನ ಜೆ.ಎಸ್. ರಾಧಾಕೃಷ್ಣ ನಾಯಕ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು, ಅಂತರ್ ರಾಜ್ಯ ಸಂಚಾರಕ್ಕೆ ವಿಧಿಸಿದ್ದ ಎಸ್ಓಪಿಯನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಪ್ರಕರಣದಹಿನ್ನೆಲೆ: ಕಾಸರಗೋಡು ಸುತ್ತಮುತ್ತಲ ಜನರು ಪೆರ್ಲ ಪಟ್ಟಣಕ್ಕೆ ಸಂಚರಿಸಬೇಕಾದ್ರೆ ಕಲ್ಲಡ್ಕ-ಚರ್ಕಳ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಾರೆ. ಈ ಮಧ್ಯೆ ಕರ್ನಾಟಕದ ಪೊಲೀಸ್ ಚೆಕ್ ಪೋಸ್ಟ್ ದಾಟಿ ಹೋಗಬೇಕಾಗುತ್ತದೆ. ಆದರೆ, ರಾಜ್ಯದ ಪೊಲೀಸರು ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ಇ-ಪಾಸ್ ಪಡೆದುಕೊಳ್ಳಲು ಸೂಚಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದ ಪೀಠ, ಕೇಂದ್ರದ ಅನ್ಲಾಕ್ 3 ಆದೇಶದಂತೆ ಅಂತರ್ ರಾಜ್ಯ ಸಂಚಾರ ಮುಕ್ತವಾಗಿದೆ. ಹಾಗಿದ್ದೂ, ಯಾವ ಆಧಾರದಲ್ಲಿ ಅಂತರ್‌ರಾಜ್ಯ ಸಂಚಾರಕ್ಕೆ ಇ-ಪಾಸ್ ಕಡ್ಡಾಯ ಮಾಡಿದ್ದೀರಿ ಎಂಬುದನ್ನು ತಿಳಿಸಿ ಎಂದು ಸೂಚಿಸಿತ್ತು. ಬಳಿಕ ಸರ್ಕಾರ ತನ್ನ ಎಸ್ಓಪಿಯನ್ನು ಪರಿಷ್ಕರಿಸಿ ಆದೇಶಿಸಿತ್ತು.