ಬೆಂಗಳೂರು:17 ವರ್ಷದ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕನಿಗೆ ಹೈಕೋರ್ಟ್ 3ನೇ ಬಾರಿಯೂ ಜಾಮೀನು ನೀಡಲು ನಿರಾಕರಿಸಿದೆ. ಅತ್ಯಾಚಾರ ಎಸಗಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಬೀದರ್ ಜಿಲ್ಲೆಯ 25 ವರ್ಷದ ಯುವಕ ಪ್ರಶಾಂತ್ ಎಂಬಾತ ಸಲ್ಲಿಸಿದ್ದ. ಅವನ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಕೆ.ಎಸ್ ಮುದಗಲ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಆರೋಪಿ ಯುವಕ ತಾನು ಯುವತಿಯೊಂದಿಗೆ ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ವಾದಿಸಿದ್ದಾನೆ. ಆದರೆ, ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆಯೇ ಹೈಕೋರ್ಟ್ ಅಪ್ರಾಪ್ತೆಯ ಸಮ್ಮತಿ ಕಾನೂನು ರೀತಿಯಲ್ಲಿ ಸಮ್ಮತಿ ಎನ್ನಿಸಿಕೊಳ್ಳುವುದಿಲ್ಲ. ಪೋಕ್ಸೋ ಕಾಯ್ದೆಯನ್ನು ಅಪ್ರಾಪ್ತರ ಕಲ್ಯಾಣಕ್ಕಾಗಿಯೇ ಜಾರಿ ಮಾಡಲಾಗಿದೆ. ಹೀಗಾಗಿ ಅಪ್ರಾಪ್ತೆಯಿಂದ ಸಮ್ಮತಿ ಪಡೆದುಕೊಂಡಿದ್ದೇನೆ ಎಂಬುದು ಕಾನೂನು ಸಮ್ಮತವಾಗದು.‘
ಇನ್ನು ಆರೋಪಿ ತಾಯಿಗೆ ತೀವ್ರ ಅನಾರೋಗ್ಯ ಇದ್ದು, ಆರೈಕೆ ಅಗತ್ಯವಿದೆ. ಹೀಗಾಗಿ ಜಾಮೀನು ನೀಡಬಹುದು ಎಂದು ಅರ್ಜಿದಾರನ ಪರ ವಕೀಲರು ಕೋರಿದ್ದಾರೆ. ಆದರೆ ಅರ್ಜಿದಾರರು ಈ ಆಧಾರದಲ್ಲಿ ಜಾಮೀನು ಕೋರಿಲ್ಲ ಮತ್ತು ತಾಯಿಗೆ ಅನಾರೋಗ್ಯ ಇರುವ ಕುರಿತಂತೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ಅರ್ಜಿದಾರನ ಜಾಮೀನು ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಪ್ರಶಾಂತ್ ವಿರುದ್ಧ 2019ರ ನವೆಂಬರ್ 8ರಂದು ಬೆಂಗಳೂರಿನ ಸಂತ್ರಸ್ತ ಅಪ್ರಾಪ್ತೆಯ ಪೋಷಕರು ದೂರು ಸಲ್ಲಿಸಿದ್ದರು. ಆ ಬಳಿಕ ತನಿಖೆ ನಡೆಸಿದ ಪೊಲೀಸರು 17 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿರುವ ಪ್ರಶಾಂತ್ ಆಕೆಯನ್ನು ಚಿಕ್ಕಬಳ್ಳಾಪುರದ ಕಂಜೇನಹಳ್ಳಿಯಲ್ಲಿ 2019ರ ನವೆಂಬರ್ 8ರಿಂದ 20ರವರೆಗೆ ಅಕ್ರಮ ವಶದಲ್ಲಿಟ್ಟಿಕೊಂಡಿದ್ದ. ಆ ಅವಧಿಯಲ್ಲಿ ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಮಾಡಿದ್ದ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363, 366, 376 ಹಾಗೂ ಪೋಕ್ಟೋ ಕಾಯ್ದೆಯ ಸೆಕ್ಷನ್ 6ರ ಅಡಿ ಎಫ್ಐಆರ್ ದಾಖಲಿಸಿ, ನಗರದ ಸೆಷನ್ಸ್ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಆ ಬಳಿಕ ಜಾಮೀನು ಕೋರಿ ಆರೋಪಿತ ಪ್ರಶಾಂತ್ ನಗರದ 4ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಆದರೆ, ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ನಂತರ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಯುವತಿ ಪ್ರೀತಿಸುತ್ತಿದ್ದು, ಒಪ್ಪಿಗೆ ಮೇರೆಗೆ ಜತೆಗಿದ್ದಿದ್ದಾಗಿ ವಾದಿಸಿದ್ದ. ಆದರೆ, ಹೈಕೋರ್ಟ್ ಅಪ್ರಾಪ್ತೆಯೊಂದಿಗಿನ ಸಂಬಂಧಕ್ಕೆ ಒಪ್ಪಿಗೆ ಪಡೆದರೂ ಅದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಎಂದಿತ್ತು. ಆರೋಪಿ ಮತ್ತೊಮ್ಮೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದ.
ಆ ಬಳಿಕ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಪ್ರಶಾಂತ್, ಪೊಲೀಸರ ಚಾರ್ಜ್ಶೀಟ್ನಲ್ಲಿ ಯುವತಿ ಸ್ವ - ಇಚ್ಛೆಯಿಂದಲೇ ಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ. ಆಕೆಯ ಸಮ್ಮತಿ ಇದ್ದು ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದ.