ಕರ್ನಾಟಕ

karnataka

ETV Bharat / state

ಅಪಘಾತ ರಹಿತ ಚಾಲನೆ: ಕೆಎಸ್ಆರ್‌ಟಿಸಿ ಚಾಲಕರಿಗೆ ಹೀರೋಸ್ ಆನ್ ದ ರೋಡ್ ಸುರಕ್ಷಾ ಪ್ರಶಸ್ತಿ - Karnataka State Road Transport Corporation

ಅಪಘಾತ ರಹಿತ ಚಾಲನೆ ಮಾಡಿ ನಿಗಮದ ಮನ್ನಣೆ ಗಳಿಸಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಇಬ್ಬರು ಚಾಲಕರಿಗೆ ಹೀರೋಸ್ ಆನ್ ದ ರೋಡ್ ಸುರಕ್ಷಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

heroes-on-the-road-suraksha-award-for-ksrtc-drivers
ಅಪಘಾತ ರಹಿತ ಚಾಲನೆ: ಕೆಎಸ್ಆರ್‌ಟಿಸಿ ಚಾಲಕರಿಗೆ ಹೀರೋಸ್ ಆನ್ ದ ರೋಡ್ ಸುರಕ್ಷಾ ಪ್ರಶಸ್ತಿ

By

Published : Apr 24, 2023, 9:22 PM IST

ಬೆಂಗಳೂರು:ಹಲವಾರು ಹೊಸತನಗಳ ಮೂಲಕ ದೇಶದಲ್ಲೇ ವಿಶಿಷ್ಟ ಸಾರಿಗೆ ನಿಗಮವಾಗಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಚಾಲಕರ ಮೂಲಕ 'ಹೀರೋಸ್ ಆನ್ ದ ರೋಡ್ ಸುರಕ್ಷಾ ಪ್ರಶಸ್ತಿ' ಪಡೆದುಕೊಂಡಿದೆ. ಮೂರು ದಶಕಗಳ ಕಾಲ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅಪಘಾತ ರಹಿತ ಚಾಲನೆ ಮಾಡಿ ನಿಗಮದ ಮನ್ನಣೆ ಗಳಿಸಿದ್ದ ಇಬ್ಬರು ಚಾಲಕರನ್ನು ಗುರುತಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ ನೀಡುವ ಹೀರೋಸ್ ಆನ್ ದ ರೋಡ್ ಸುರಕ್ಷಾ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಜೊತೆಗೆ ನಿಗಮದಿಂದಲೂ ಉಭಯ ಚಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗದ ಹುಣಸೂರು ಘಟಕದಲ್ಲಿ 33 ವರ್ಷಗಳ ಅಪಘಾತ ರಹಿತ ಚಾಲನಾ ಸೇವೆ ಸಲ್ಲಿಸಿರುವ ಚಾಲಕ ಎಜಾಜ್ ಅಹಮದ್ ಶರೀಫ್ ಹಾಗೂ ಸಾತಹಳ್ಳಿ ಘಟಕದ ಇಶಾಕ್ ಶರೀಫ್ ಅವರಿಗೆ ಹೀರೋಸ್ ಆನ್ ದ ರೋಡ್ ಸುರಕ್ಷಾ ಪ್ರಶಸ್ತಿ ನೀಡಲಾಯಿತು. ನವದೆಹಲಿಯಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿಗಮದ ವಿಜೇತ ಚಾಲಕರುಗಳಿಗೆ ಪ್ರಶಸ್ತಿ ಮತ್ತು 10,000 ರೂ. ನಗದು ಪುರಸ್ಕಾರವನ್ನು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಅವರು ನೀಡಿದರು.

ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಇಬ್ಬರು ಚಾಲಕರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮವೂ ಸನ್ಮಾನಿಸಿ ಗೌರವಿಸುವ ಮೂಲಕ ಇತರ ಚಾಲಕರಿಗೆ ಪ್ರೇರಣೆ ನೀಡುವ ಕೆಲಸ ಮಾಡಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ (ASRTU) ಪ್ರದಾನ ಮಾಡುವ ಹೀರೋಸ್ ಆನ್ ದ ರೋಡ್ ಪ್ರಶಸ್ತಿ ಪಡೆದ ಎಜಾಜ್ ಅಹಮ್ಮದ್ ಶರೀಫ್ ಹಾಗೂ ಇಶಾಕ್ ಶರೀಫ್ ಅವರನ್ನು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ತಲಾ 5000 ರೂ. ನಗದು ಪುರಸ್ಕಾರ ನೀಡಿ, ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ‌ ನಿರ್ದೇಶಕ ಅನ್ಬುಕುಮಾರ್, 'ಈ ಚಾಲಕರುಗಳು ಈಗಾಗಲೇ ನಿಗಮದಿಂದ ಬೆಳ್ಳಿ ಮತ್ತು ಚಿನ್ನದ ಪದಕ ಪಡೆದಿರುವುದನ್ನು ಸ್ಮರಿಸಿದರು. ಹಾಗೂ ಚಾಲನಾ ವೃತ್ತಿಯು ಅತ್ಯಂತ ಕಷ್ಟ ಮತ್ತು ಜವಾಬ್ದಾರಿಯಿಂದ ಕೂಡಿದ್ದು, ಅಪಘಾತಗಳನ್ನು ತಡೆಗಟ್ಟುವುದು ಸವಾಲೇ ಸರಿ. ತಮ್ಮದಲ್ಲದ ತಪ್ಪಿನಿಂದಲೂ ಹಲವು ಬಾರಿ ಅಪಘಾತ ಉಂಟಾಗುತ್ತದೆ. ಚಾಲಕರು ಹೆಚ್ಚು ಸಂಯಮ ಮತ್ತು ತಾಳ್ಮೆಯನ್ನು ಹೊಂದಿದ್ದರೆ ಮಾತ್ರ ಈ ರೀತಿಯ ಸಾಧನೆ ಮಾಡಲು ಸಾಧ್ಯ. ಸದರಿ ಚಾಲಕರುಗಳ ಸೇವೆಯು ಅನನ್ಯ ಮತ್ತು ಅನುಕರಣೀಯ' ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ತೆಲಂಗಾಣ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ 2023ನೇ ಸಾಲಿನ ಸೌತ್ ಇಂಡಿಯನ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್​ನಲ್ಲಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ ಗೆದ್ದಿರುವ ಮುದ್ರಣಾಲಯ ಕಿರಿಯ ಸಹಾಯಕಿ ಖುದ್ಸಿಯ ನಜೀರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರವರು ಅಭಿನಂದಿಸಿ ಗೌರವಿಸಿದರು. ಕಠಿಣವಾದ ಪರಿಶ್ರಮದ ಮೂಲಕ ವೇಟ್ ಲಿಫ್ಟಿಂಗ್ ಕ್ರೀಡೆಯಲ್ಲಿ ಈ ಸಾಧನೆ ಮಾಡಿರುವುದು‌‌ ನಿಜಕ್ಕೂ ಹೆಮ್ಮೆಯ ವಿಷಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಹಿರಿಯ ಅಧಿಕಾರಿಗಳು, ಚಾಲಕರ ಕುಟುಂಬದವರು ಹಾಜರಿದ್ದರು.

ABOUT THE AUTHOR

...view details