ಬೆಂಗಳೂರು: ಜಿಎಸ್ಟಿ ಪರಿಹಾರ ನೀಡುವಿಕೆ ಕಳೆದ ಜೂನ್‌ನಲ್ಲೇ ಮುಕ್ತಾಯವಾಗಿದೆ. ಬಜೆಟ್ ತಯಾರಿಯಲ್ಲಿರುವ ರಾಜ್ಯ ಸರ್ಕಾರಕ್ಕೆ ಇನ್ನು ಮುಂದೆ ಜಿಎಸ್ಟಿ ಪರಿಹಾರ ಹಣ ಇಲ್ಲದೆಯೇ ಹಣಕಾಸು ನಿರ್ವಹಣೆ ಮಾಡಬೇಕಾಗಿರುವುದು ದೊಡ್ಡ ಸವಾಲಾಗಿದೆ. ಆದರೆ. ದುರಂತ ಅಂದರೆ ಇನ್ನೂ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ. ಜಿಎಸ್ಟಿ ಪರಿಹಾರ ಹಣ ಬಾಕಿ ಉಳಿಸಿಕೊಂಡಿದೆ.
ಬೊಮ್ಮಾಯಿ ಸರ್ಕಾರ ಇದೀಗ ತಮ್ಮ ಚುನಾವಣಾ ವರ್ಷದ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಜನಪ್ರಿಯ ಯೋಜನೆ, ಹೊರೆ ಇಲ್ಲದ ಬಜೆಟ್ ಮಂಡನೆಗೆ ಸಿಎಂ ಕಸರತ್ತು ನಡೆಸುತ್ತಿದ್ದಾರೆ. ಆದಾಯ ಸಂಗ್ರಹ ನಿರೀಕ್ಷೆಗಿಂತಲೂ ಉತ್ತಮ ಚೇತರಿಕೆ ಕಂಡಿದ್ದರೂ, ಹೆಚ್ಚಲಿರುವ ಬದ್ಧತಾ ವೆಚ್ಚ, ಜನಪ್ರಿಯ ಘೋಷಣೆಗಳಿಗೆ ಹಣ ಹೊಂದಿಸಲು ಅಧಿಕ ಸಂಪನ್ಮೂಲದ ಅನಿವಾರ್ಯತೆ ಇದೆ. ಇತ್ತ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಹೊರತು ಪಡಿಸಿ ಉಳಿದಂತೆ ಗಣನೀಯ ಅನುದಾನ ಹರಿದು ಬಂದಿಲ್ಲ.
ಹೀಗಾಗಿ ಈ ಬಾರಿ ಅಧಿಕ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಜಿಎಸ್ಟಿ ಪರಿಹಾರ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುವ ಪರಿಹಾರ ಮೊತ್ತ. ಜಿಎಸ್ಟಿ ಜಾರಿಯಾದ ಬಳಿಕ ರಾಜ್ಯಗಳು ಅನುಭವಿಸುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಐದು ವರ್ಷಗಳಿಂದ ಜಿಎಸ್ಟಿ ಪರಿಹಾರವನ್ನು ಕೊಡುತ್ತಾ ಬರುತ್ತಿದೆ. ಅದರಂತೆ ಜಿಎಸ್ಟಿ ಪರಿಹಾರ ಕಳೆದ ವರ್ಷ ಜೂನ್ಗೆ ಮುಕ್ತಾಯವಾಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ಜಿಎಸ್ಟಿ ಪರಿಹಾರ ದೊಡ್ಡ ವರದಾನವಾಗಿತ್ತು. ಅದೀಗ ಮುಕ್ತಾಯವಾಗಿದೆ. ಆದರೆ, ಬೊಮ್ಮಾಯಿ ಸರ್ಕಾರಕ್ಕೆ ಕೇಂದ್ರ ಸರ್ಕಾರ ಇನ್ನೂ ಸಾವಿರಾರು ಕೋಟಿ ಜಿಎಸ್ಟಿ ಪರಿಹಾರ ಹಣವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಇದು ಬೊಮ್ಮಾಯಿ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
12,100 ಕೋಟಿ ರೂ. ಜಿಎಸ್ಟಿ ಪರಿಹಾರ ಬಾಕಿ:ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಇನ್ನೂ ಬರೋಬ್ಬರಿ 12,101 ಕೋಟಿ ರೂ. ಜಿಎಸ್ಟಿ ಪರಿಹಾರ ಹಣ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಬೆನ್ನುತಟ್ಟುವ ಸರ್ಕಾರಕ್ಕೆ ಜಿಎಸ್ಟಿ ಪರಿಹಾರ ಹಣ ತರಿಸುವುದು ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಜಿಎಸ್ಟಿ ಪರಿಹಾರ ಮೊತ್ತ ನೀಡುವಿಕೆ ಕಳೆದ ಜೂನ್‌ನಲ್ಲೇ ಮುಕ್ತಾಯವಾಗಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಇದುವರೆಗೆ ಬರೋಬ್ಬರಿ 12,101 ಕೋಟಿ ರೂ. ಜಿಎಸ್ಟಿ ಪರಿಹಾರ ಹಣ ರಾಜ್ಯಕ್ಕೆ ಪಾವತಿಸದೇ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ.