ಸಂಸದ ತೇಜಸ್ವಿ ಸೂರ್ಯ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದ್ದು, ಅದಕ್ಕಾಗಿ ನಮ್ಮ ಕಾರ್ಯಕರ್ತರಿಗಾಗಿ ಹೆಲ್ಪ್ ಲೈನ್ ಆರಂಭಿಸುತ್ತಿದ್ದೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಬಿಜೆಪಿ ಕಚೇರಿಯಲ್ಲಿ ಕಾನೂನು ಪ್ರಕೋಷ್ಠದ ಸಭೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ಕಾನೂನಾತ್ಮಕ ದೌರ್ಜನ್ಯಗಳನ್ನು ಎದುರಿಸಲು ಹೆಲ್ಪ್ ಲೈನ್ ಸಂಖ್ಯೆಯನ್ನು ರಾಜ್ಯದಲ್ಲಿ ಘೋಷಣೆ ಮಾಡುತ್ತೇವೆ. ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ನಾಯಕರು ಮಾಡುತ್ತಾ ಇರುವ ಆರೋಪ, ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸ್ತಾ ಇರೋದು, ಸರ್ಕಾರದ ಬೇರೆ ಬೇರೆ ಮಂತ್ರಿಗಳು, ಮುಖಂಡರು ನಮ್ಮ ಕಾರ್ಯಕರ್ತರ ವಿರುದ್ಧ ಹೇಳಿಕೆ ಕೊಡುತ್ತಿರುವುದು, ಟಾರ್ಗೆಟ್ ಮಾಡುತ್ತಿರುವುದು ಎಲ್ಲವೂ ಗಮನಕ್ಕೆ ಬಂದಿದೆ ಎಂದರು.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಹೀಗೆ ಮಾಡಿದ್ರು. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸೋದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋರ ಮೇಲೆ ಕೇಸ್ ಹಾಕೋದು. ಇಂದಿನ ನಮ್ಮ ಸಭೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಮಾಡುವ ಈ ರೀತಿಯ ಚಟುವಟಿಕೆಗಳಿಗೆ ಹಾಕುವ ಕಾನೂನು ಕೇಸ್ ಬಗ್ಗೆ ಎದಿರಿಸೋಕೆ ನಾವು ಸಿದ್ಧರಾಗಿದ್ದೇವೆ.
ನಾವು ನಮ್ಮ ಕಾರ್ಯಕರ್ತರಿಗಾಗಿ ಹೆಲ್ಪ್ ಲೈನ್ ನಂಬರ್ ನೀಡುತ್ತೇವೆ. ಆ ಹೆಲ್ಪ್ ಲೈನ್ 24 ಗಂಟೆ ಕೆಲಸ ಮಾಡಲಿದೆ. ಯಾವುದೇ ಪೊಲೀಸ್ ಸ್ಟೇಷನ್, ಯಾವುದೇ ಕೋರ್ಟ್ನಲ್ಲಿ ಆಗುವ ಕೇಸ್ ಹಾಕಿಸುವ ಕೆಲಸ ಆದರೆ, ನಮ್ಮ ಕಾರ್ಯಕರ್ತರ ರಕ್ಷಣೆಗೆ ನಮ್ಮ ಕಾನೂನು ಪ್ರಕೋಷ್ಠ ತಂಡ ಇದೆ. ಬೆಂಗಳೂರು, ಕಲಬುರಗಿ, ಹುಬ್ಬಳ್ಳಿಯಲ್ಲಿ ನಮ್ಮ ತಂಡ ಕೆಲಸ ಮಾಡಲಿದೆ ಎಂದು ತಿಳಿಸಿದರು. ಕಾನೂನು ಪ್ರಕೋಷ್ಠದ ಮೂಲಕ ನಾವು ನಮ್ಮ ಕಾರ್ಯಕರ್ತರ ರಕ್ಷಣೆ ಮಾಡ್ತೇವೆ. ಹೆಗಲಿಗೆ ಹೆಗಲು ನೀಡಿ ಅವರ ಜೊತೆ ಇರುತ್ತೇವೆ. ನ್ಯಾಯದ ಪರ ಹೋರಾಟ ಮಾಡುವವರ ಜೊತೆ ನಾವು ಇರುತ್ತೇವೆ. ನಮ್ಮ ವಿಚಾರಧಾರೆಗೆ ಹೋರಾಟ ಮಾಡುವವರ ಜೊತೆ ನಾವು ನಮ್ಮ ತಂಡ ಇರಲಿದೆ ಎಂದು ವಿವರಿಸಿದರು.
ನಮ್ಮ ಕಾರ್ಯಕರ್ತರ ಮೇಲೆ ಅಂದು ರೌಡಿ ಶೀಟ್ ಓಪನ್ ಮಾಡುವ ಕೆಲಸ ಆಗಿತ್ತು. ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಸರಿಯಾಗಿ ಕೇಸ್ ನಡೆಸದೇ ಇದ್ದಿದ್ದೂ ನಮ್ಮ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಇರುವ ನಮ್ಮ ವಕೀಲರ ತಂಡ ಕಾರ್ಯಕರ್ತರ ನೆರವಿಗೆ ಧಾವಿಸಲಿದೆ. ಬಿಜೆಪಿಯ ಕಾನೂನು ಪ್ರಕೋಷ್ಠದಿಂದ ತಂಡವನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತೇವೆ. ಗಣಪತಿ ಪೆಂಡಾಲ್ ಹಾಕಲು ಕೂಡಾ ಕೋರ್ಟ್ವರೆಗೂ ಹೋಗಿ ಅನುಮತಿ ಪಡೆಯುವ ದೈನೇಸಿ ಸ್ಥಿತಿ ಬಂದಿತ್ತು. ಆ ಸ್ಥಿತಿ ಮತ್ತೆ ಬರದಂತೆ ಕೋರ್ಟ್ನಲ್ಲಿ ಪಿಐಎಲ್, ರಿಟ್ ಹಾಕಲು ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ವಕೀಲರ ತಂಡ ಇರಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದರು.
ಇದನ್ನೂ ಓದಿ:ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು?: ಸಚಿವ ಕೆ ವೆಂಕಟೇಶ್ ಪ್ರಶ್ನೆ