ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಪಕ್ಷಿ ಡಿಕ್ಕಿ ಬೆಂಗಳೂರು: ಚುನಾವಣೆ ಪ್ರಚಾರಕ್ಕಾಗಿ ತೆರಳುತ್ತಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿದ್ದ ಹೆಲಿಕಾಪ್ಟರ್ಗೆ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ಗಾಜು ಪುಡಿಯಾಗಿದ್ದು, ತುರ್ತು ಭೂ ಸ್ಪರ್ಶ ಮಾಡಲಾಗಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಸಮಾರಂಭ ಮುಗಿದ ಬಳಿಕ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಎಚ್ಎಎಲ್ ನಿಂದ ಕೋಲಾರದ ಮುಳಬಾಗಿಲಿಗೆ ತೆರಳುತ್ತಿದ್ದ ಸಂದರ್ಭ ಹೊಸಕೋಟೆ ಬಳಿ ಪಕ್ಷಿಯೊಂದು ಹೆಲಿಕಾಪ್ಟರ್ ಮುಂಭಾಗದ ಗಾಜಿಗೆ ಡಿಕ್ಕಿ ಹೊಡೆದಿದೆ. ಪೈಲೆಟ್ ಸೇರಿದಂತೆ ಹೆಲಿಕ್ಯಾಪ್ಟರ್ ನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು.
ಎಚ್ಎಎಲ್ ನಿಂದ ಹೊರಟು ಹತ್ತು ನಿಮಿಷಕ್ಕೆ ಅವಘಡ ಸಂಭವಿಸಿದೆ. ವಾಪಸ್ ಎಚ್ಎಎಲ್ಗೆ ಬಂದು ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ. ಘಟನೆಯಿಂದ ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ. ಹೆಲಿಕ್ಯಾಪ್ಟರ್ ನಲ್ಲಿ ಖಾಸಗಿ ವಾಹಿನಿಯ ಸಂದರ್ಶನ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದ ಟಿವಿ ಕ್ಯಾಮರಾಮನ್ ಕುಲಕರ್ಣಿ ಹಾಗೂ ಶಿವಕುಮಾರ ಜೊತೆ ಪ್ರಯಾಣಿಸುತ್ತಿದ್ದ ಅವರ ರಾಜಕೀಯ ಸಲಹೆಗಾರ ಅಮಿತ್ ಪಾಳ್ಯಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ‘ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜೊತೆಗಿದ್ದು, ನನ್ನನ್ನು ಕಾಪಾಡಿದ್ದಾರೆ. ನಮ್ಮ ಹೆಲಿಕಾಪ್ಟರ್ ಟೇಕಾಫ್ ಆಗಿ 7-8 ನಿಮಿಷ ಕಳೆದಿತ್ತು. ನಾವು ಹೊಸಕೋಟೆ ಹತ್ತಿರ ತಲುಪಿದಾಗ ದೊಡ್ಡ ಹದ್ದು ಬಂದು ಡಿಕ್ಕಿ ಹೊಡೆಯಿತು. ಮಾಧ್ಯಮದವರು ಪಕ್ಷದ ಪ್ರಣಾಳಿಕೆ ಕುರಿತು ಸಂದರ್ಶನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್ ಹಾರಾಟದ ಎತ್ತರವನ್ನು ಕಡಿಮೆ ಮಾಡಿ ನಮ್ಮನ್ನು ರಕ್ಷಿಸಿದ್ದಾರೆ. ಈಗ ಬೇರೆ ಹೆಲಿಕಾಪ್ಟರ್ ಸಿಗದ ಕಾರಣ, ರಸ್ತೆ ಮಾರ್ಗವಾಗಿ ಮುಳಬಾಗಿಲಿಗೆ ತೆರಳುತ್ತಿದ್ದೇವೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ, ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ. ಪ್ರಯಾಣದ ವೇಳೆ ಮೂರು ಹದ್ದುಗಳು ಎದುರಾಗಿದ್ದು, ಪೈಲಟ್ ಎರಡು ಹದ್ದುಗಳನ್ನು ದಾಟಿದ್ದರು. ಮೂರನೇ ಹದ್ದು ಕೆಳಗಡೆಯಿಂದ ಮೇಲೆ ಬಂದು ಡಿಕ್ಕಿ ಹೊಡೆಯಿತು. ಯಾರೂ ಇದರಿಂದ ಗಾಬರಿಯಾಗುವುದು ಬೇಡ, ಇದೊಂದು ಆಕಸ್ಮಿಕ, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಸಾಗೋಣ’ ಎಂದು ತಿಳಿಸಿದರು.
ಘಟನೆ ಬಗ್ಗೆ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ಇಂದು ಜಕ್ಕೂರಿನಿಂದ ಮುಳಬಾಗಿಲಿಗೆ ತೆರಳುವಾಗ ಹೆಲಿಕಾಪ್ಟರ್ ಟೇಕ್‌ಆಫ್ ಆದ ಕೆಲವೇ ಕ್ಷಣದಲ್ಲಿ ಅವಘಡ ಸಂಭವಿಸಿದ್ದು, ಕನ್ನಡಿಗರ ಆಶೀರ್ವಾದದಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಸಹ ಪ್ರಯಾಣಿಕ ಹಾಗೂ ಪೈಲಟ್‌ಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಂಚನೆ ಪ್ರಕರಣ: ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು