ಬೆಂಗಳೂರು:ಹೆಬ್ಬಾಳ ಮೇಲ್ಸೇತುವೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ದಟ್ಟಣೆ ಉಂಟಾಗುತ್ತಿದೆ. ಪರಿಣಾಮ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರು ಹರಸಾಹಸವನ್ನೇ ಮಾಡುವಂತಾಗಿದೆ.
ಈ ಮಾರ್ಗವಾಗಿ ಚಿಕ್ಕಬಳ್ಳಾಪುರ, ಬಳ್ಳಾರಿ, ಅನಂತಪುರಂ, ಹೈದರಾಬಾದ್ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಏರ್ಪೋರ್ಟ್ಗೆ ಹೋಗುವ ಮತ್ತು ಹೊರಬರುವ ಪ್ರಯಾಣಿಕರಿಗೆ ಸಮಸ್ಯೆ ಆಗಬಾರದೆಂದು 29 ಕಿಮೀ.ರಸ್ತೆಯನ್ನು ಸಿಗ್ನಲ್ ಫ್ರೀ ಮಾಡಲಾಗಿದೆ. ಆದರೂ ಟ್ರಾಫಿಕ್ ಜಾಮ್ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರು ನಗರ ಸಂಚಾರಿ ಪೊಲೀಸರು ಕಳೆದ ನಾಲ್ಕು ವರ್ಷಗಳಿಂದ ಅಧ್ಯಯನ ನಡೆಸಿ, ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ನಿವಾರಣೆ ಹಾಗೂ ವಾಹನಗಳ ಓಡಾಟದಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ.
ಮುಖ್ಯರಸ್ತೆಗಳ ಬದಲು ಸರ್ವೀಸ್ ರಸ್ತೆ ಬಳಸಿ:ಯಲಹಂಕ, ಕೊಡಿಗೇಹಳ್ಳಿ, ಕೆಂಪಾಪುರ, ಜಕ್ಕೂರು ಕಡೆಗಳಿಂದ ಬರುವ ಜನರು ನೇರವಾಗಿ ಫ್ಲೈಓವರ್ ಹತ್ತುವ ಬದಲು ಲೂಪ್ರ್ಯಾಂಪ್ ಬಳಸಿ ನಗರಕ್ಕೆ ಬರುವಂತೆ ಸೂಚಿಸಲಾಗಿದೆ. ಬರುವ ಶುಕ್ರವಾರದಿಂದ ಈ ಆದೇಶ ಜಾರಿಯಾಗಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದರು.