ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆಯೇ ರಾಜ್ಯ ವಿಧಾನಸಭಾ ಚುನಾವಣೆ ಕಾವೂ ಸಹ ಏರತೊಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಚುನಾವಣೆ ಜ್ವರ ಆರಂಭವಾಗಿದ್ದು, ಕ್ಷೇತ್ರಗಳಲ್ಲೂ ಆಕಾಂಕ್ಷಿ ಅಭ್ಯರ್ಥಿಗಳು ಮತಬೇಟೆಗೆ ಇಳಿದಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲೂ ಚುನಾವಣೆ ಕಾವೇರುತ್ತಿದೆ.
ಕ್ಷೇತ್ರವಾರು ನೋಡುವುದಾದರೆ, ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಹೆಬ್ಬಾಳವೂ ಒಂದು. ಮೊದಲು ಹೆಬ್ಬಾಳ ಮಹಾನಗರ ಪಾಲಿಕೆ ವ್ಯಾಪ್ತಿಯ ಕೊನೇಯ ಪ್ರದೇಶವಾಗಿತ್ತು. ಆದರೆ, ಇದೀಗ ಯಲಹಂಕವರೆಗೂ ವಿಸ್ತರಿಸಿದೆ. ಕೆರೆಗಳು, ಲುಂಬಿಣಿ ಗಾರ್ಡನ್, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಹಲವು ಟೆಕ್ ಪಾರ್ಕ್ಗಳು, ಫ್ಲೈಓವರ್, ಜಿಕೆವಿಕೆ, ಹೆಬ್ಬಾಳ ಪಶುವಿದ್ಯಾನಿಲಯ ಈ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕ್ಷೇತ್ರದಲ್ಲಿ ಬೇರೆ ಬೇರೆ ಭಾಷಿಕರು ನೆಲೆಸಿದ್ದಾರೆ. ಮುಖ್ಯವಾಗಿ ನಗರದ ಪ್ರಮುಖ ಪ್ರವೇಶದ್ವಾರವಾಗಿದ್ದು ಏರ್ಪೋರ್ಟ್, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಆಂಧ್ರದ ಅನಂತಪುರ ಕಡೆ ಹೋಗಬೇಕಾದರೆ ಇದೇ ರಸ್ತೆ ಮೂಲಕವೇ ಹಾದು ಹೋಗಬೇಕು. ಹೆಬ್ಬಾಳ ಫ್ಲೈಓವರ್ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಯಲಹಂಕ ಕಡೆ ಹೋಗುವ ಹಾಗೂ ನಗರಕ್ಕೆ ಬರುವ ವಾಹನ ಸವಾರರು ದಿನನಿತ್ಯ ಕಿರಿಕಿರಿ ಅನುಭವಿಸಿಯೇ ಓಡಾಡಬೇಕು. ಇದರ ಪರಿಹಾರಕ್ಕೆ ಫ್ಲೈಓವರ್ ವಿಸ್ತರಣೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ.
ಕಿರಿದಾದ ರಸ್ತೆ, ಗುಂಡಿ ಬಿದ್ದ ರಸ್ತೆಗಳು, ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಕೊರತೆ ಕ್ಷೇತ್ರದಲ್ಲಿ ಕಾಣುತ್ತಿದೆ. ಕೆಲವು ವಾರ್ಡ್ಗಳು ಒಂದಷ್ಟು ಸುಸಜ್ಜಿತವಾಗಿ ಕಂಡರೂ ಬಹುಪಾಲು ಕಡೆ ಸಮಸ್ಯೆ ಎದ್ದು ಕಾಣಿಸುತ್ತಿದೆ. ಇದೇ ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಮತಗಳಿಕೆ ಮೇಲೆ ಪರಿಣಾಮ ಬೀರಬಹುದು. ದುಡಿಯುವ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹೆಬ್ಬಾಳ ಕ್ಷೇತ್ರದಲ್ಲಿ ಬಹುಮಹಡಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಶ್ರೀಮಂತರ ಬಂಗಲೆಗಳಿಗೂ ಕಡಿಮೆ ಇಲ್ಲ. ಹೊರ ರಾಜ್ಯಗಳಿಂದ ಕೆಲಸ ಅರಸಿ ನಗರಕ್ಕೆ ಬಂದು ನೆಲೆಸಿರುವ ಉತ್ತರ ಭಾರತ ಮೂಲದ ಜನರು ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾಫ್ಟ್‌ವೇರ್ ಕಂಪನಿಗಳಿಗೆ ನೇರ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಯ ಕಾರಣದಿಂದಾಗಿ ಈ ಭಾಗದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಸಾಫ್ಟ್‌ವೇರ್ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ.
ಕ್ಷೇತ್ರ ವ್ಯಾಪ್ತಿ: ರಾಧಾಕೃಷ್ಣ ದೇವಸ್ಥಾನ ವಾರ್ಡ್, ಸಂಜಯ ನಗರ, ಗಂಗಾನಗರ, ಹೆಬ್ಬಾಳ, ವಿಶ್ವನಾಥ ನಾಗೇನಹಳ್ಳಿ, ಮನೋರಾಯನಪಾಳ್ಯ, ಗಂಗೇನಹಳ್ಳಿ, ಜೆ.ಸಿ.ನಗರ ವಾರ್ಡ್ಗಳನ್ನು ಹೆಬ್ಬಾಳ ವಿಧಾನಸಭಾ ಕ್ಷೇತ್ರ ಹೊಂದಿದೆ.
ರಾಜಕೀಯ ಇತಿಹಾಸವೇನು?: ಕ್ಷೇತ್ರ ಮರುವಿಂಗಡಣೆಯ ಬಳಿಕ ನಡೆದ ಚುನಾವಣಿಯಲ್ಲಿ ಬಿಜೆಪಿ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಪಾಲಿಗೆ ಪ್ರಭಾವಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು ಕ್ಷೇತ್ರ ಪ್ರತಿನಿಧಿಸಿದ್ದರು. 46,715 ಮತ ಪಡೆದು ಕಾಂಗ್ರೆಸ್‌ನ ಹೆಚ್.ಎಂ.ರೇವಣ್ಣ ಅವರನ್ನು 4,952 ಮತಗಳ ಅಂತರದಿಂದ ಸೋಲಿಸಿದ್ದರು. ಜೆಡಿಎಸ್ ಕೇವಲ 4,149 ಮತ ಗಳಿಸಿ ಠೇವಣಿ ಕಳೆದುಕೊಂಡಿತ್ತು. 2013ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಂಡಿತು. ಕೇವಲ 38,162 ಮತ ಪಡೆದರೂ ಕಾಂಗ್ರೆಸ್ ಅಭ್ಯರ್ಥಿಯನ್ನು 5,136 ಮತಗಳಿಂದ ಸೋಲಿಸಿತು. ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿತ್ತು.