ಬೆಂಗಳೂರು: ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ರಾಜ್ಯಾದ್ಯಂತ ಗುತ್ತಿಗೆದಾರರು, ಉದ್ಯಮಿಗಳು, ಚಾರ್ಟೆಡ್ ಅಕೌಂಟೆಂಟ್‌ಗಳ ನಿವಾಸ, ಕಚೇರಿ ಮೇಲೆ ನಡೆಸಿರುವ ದಾಳಿಯಲ್ಲಿ ಪತ್ತೆಯಾದ ಮಹತ್ವದ ದಾಖಲೆ ಪರಿಶೀಲಿಸಿದಾಗ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚಿಸಿರುವುದು ಕಂಡುಬಂದಿದೆ.
ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಇಂದೂ ಸಹ ದಾಳಿ ಮುಂದುವರೆಸಿದ್ದು, ಗುತ್ತಿಗೆದಾರರ ಮನೆ, ಕಚೇರಿಯಲ್ಲಿ ಜಪ್ತಿ ಮಾಡಿದ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಜಲಸಂಪನ್ಮೂಲ ಇಲಾಖೆಯ ಕೆಲ ಯೋಜನೆಗಳಲ್ಲಿ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಾದ ಬಳಿಕ ಆ ಹಣವನ್ನು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದರು. ಈ ವೇಳೆ ಲೆಕ್ಕಪರಿಶೋಧಕರ ಸಹಾಯ ಪಡೆದು ತಪ್ಪು ಲೆಕ್ಕ ತೋರಿಸಿ, ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚಿಸಿದ್ದಾರೆ ಎನ್ನಲಾಗಿದೆ.