ಬೆಂಗಳೂರು:ಜಯನಗರ ಮತ್ತು ಬಸವನಗುಡಿ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ನೀರು ನುಗ್ಗಿ ಹಾನಿ ಸಂಭವಿಸಿದ ಪ್ರದೇಶಗಳಿಗೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆ ಬ್ಲಾಕ್ ಮಾಡಿದ್ದರಿಂದ ಸಮಸ್ಯೆಯಾಗಿದ್ದು ಬ್ಲಾಕೇಜ್ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ: ನೀರು ನುಗ್ಗಿದ ಪ್ರದೇಶಗಳಿಗೆ ಆರ್ ಅಶೋಕ್ ಭೇಟಿ ಸಂಜೆ ಸುರಿದ ಭಾರಿ ಮಳೆಯಿಂದ ನಗರದ ಹಲವು ಭಾಗದಲ್ಲಿ ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಹೆಚ್ಚು ಹಾನಿ ಸಂಭವಿಸಿದ ಪ್ರದೇಶಕ್ಕೆ ಸಚಿವ ಅಶೋಕ್ ಭೇಟಿ ನೀಡಿದರು. ಮಳೆ ಅವಾಂತರದಿಂದ ಸೃಷ್ಟಿಯಾದ ಸಮಸ್ಯೆಗಳ ಪರಿಶೀಲನೆ ಮಾಡಿದರು.
ಈ ವೇಳೆ ಮಾತನಾಡಿದ ಅಶೋಕ್, ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಜಾಸ್ತಿ ಮಳೆ ಬಂದಿದ್ದು, ಬಸವನಗುಡಿ ಜಯನಗರ ಭಾಗದಲ್ಲಿ ನೀರು ನುಗ್ಗಿದೆ. ಇಲ್ಲಿ ರಾಜಕಾಲುವೆ ಉಕ್ಕಿ ಹರಿದ ಕಾರಣ ಎಲ್ಲ ಕಡೆ ನುಗ್ಗಿದೆ. 15- 20 ವರ್ಷಗಳಲ್ಲಿ ಮೊದಲ ಬಾರಿ ಇಂತಹ ಘಟನೆ ನಡೆದಿದೆ ಎಂದರು.
ಇಲ್ಲಿ ಕಂದಾಯ ಬಡಾವಣೆಗಳು ಜಾಸ್ತಿ ಇದ್ದು, ರಾಜಕಾಲುವೆಯ ಮೋರಿಗಳನ್ನು ಮುಚ್ಚಿಹಾಕಿದ್ದಾರೆ. ಹಾಗಾಗಿ ಇಂತಹ ಘಟನೆ ನಡೆದಿದೆ. ಮಳೆ ನಿಂತ ನಂತರ ಇದೆಲ್ಲವೂ ತಿಳಿಯಾಗಲಿದೆ. ಹಾನಿಗೊಳಗಾದ ಮನೆಗಳ ಕುಟುಂಬಗಳಿಗೆ ಊಟ ವಸತಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಮತ್ತೆ ಜಂಟಿ ಆಯುಕ್ತರ ಜೊತೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಹಾನಿ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರಾಜಕಾಲುವೆಗಳನ್ನು ಬ್ಲಾಕ್ ಮಾಡಿಕೊಂಡು ಕಂದಾಯ ಬಡಾವಣೆಗಳನ್ನು ಕಟ್ಟಿಕೊಂಡಿದ್ದಾರೆ. ರಾಜಕಾಲುವೆ ಬ್ಲಾಕ್ ಮಾಡಲಾಗಿದೆ ಇದನ್ನು ಯಾರು ಮಾಡಿದ್ದಾರೆ ಗೊತ್ತಿಲ್ಲ. ಎಷ್ಟೇ ದೊಡ್ಡವರಿದ್ದರೂ ಇಲ್ಲಿ ರಾಜಕಾಲುವೆ ಒತ್ತವರಿ ತೆರವು ಮಾಡಲಾಗುತ್ತದೆ ಎಂದರು.
ಈಗಾಗಲೇ ಸ್ಥಳಕ್ಕೆ ವಿಪತ್ತು ನಿರ್ವಹಣಾ ದಳದ ತಂಡ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮನೆಗಳಿಗೆ ಹಾನಿ, ವಸ್ತುಗಳ ಹಾನಿಗೆ ಪರಿಹಾರ ನೀಡುವ ಸಂಬಂಧ ನಾಳೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.