ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಮುಂದಿನ 2 ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆ ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾಸನ, ಮಂಡ್ಯ, ಮೈಸೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.
ಉತ್ತರ ಕರ್ನಾಟಕ ಭಾಗದ ಯಾದಗಿರಿ, ವಿಜಯಪುರ, ರಾಯಚೂರು, ಧಾರವಾಡ, ಕೊಪ್ಪಳ, ಗದಗ ಜಿಲ್ಲೆಗಳು ಮತ್ತು ತುಮಕೂರು, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಆಗಸ್ಟ್ 2 ರಿಂದ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹೇಳಿದೆ.
ಸಿಲಿಕಾನ್ ಸಿಟಿಯಲ್ಲಿ ಶನಿವಾರ ಮಳೆಯ ಅವಾಂತರ: ಶನಿವಾರ ರಾತ್ರಿ ಸುಮಾರು 2 ತಾಸು ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ರಾತ್ರಿ 9 ಗಂಟೆ ವೇಳೆಗೆ ದಿಢೀರ್ ಆರಂಭಗೊಂಡ ಮಳೆಯು 11 ಗಂಟೆಯವರೆಗೂ ಮುಂದುವರಿಯಿತು.
ಸಿಲಿಕಾನ್ ಸಿಟಿಯ ಶ್ರೀರಾಂಪುರ, ರಾಜಾಜಿ ನಗರ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ, ಯಲಹಂಕ, ಮಾಗಡಿ ರಸ್ತೆ, ಜಯನಗರ, ಬನಶಂಕರಿ, ಮೆಜೆಸ್ಟಿಕ್, ಶಿವಾಜಿ ನಗರ, ಕೆಂಗೇರಿ, ಜೆ. ಸಿ ನಗರ, ಹೆಬ್ಬಾಳ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಭಾರಿ ಮಳೆಯಾಗಿತ್ತು.
ಮುಂದಿನ 2 ದಿನ ಮಳೆ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನರು ತೊಂದರೆಗೀಡಾದರು. ರಸ್ತೆಗಳಲ್ಲೇ ನೀರು ಹರಿದ ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೀಡಾದರು. ರಾಜಧಾನಿಯಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಓದಿ:ಅರಣ್ಯಾಧಿಕಾರಿಗಳ ದಾಳಿ : 4. 5 ಲಕ್ಷ ಮೌಲ್ಯದ ಮರದ ದಿಮ್ಮಿಗಳು ವಶ, ಮೂವರ ಬಂಧನ