ಬೆಂಗಳೂರು: ಎಡೆ ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಸಿಲಿಕಾನ್ ಸಿಟಿ ಅಕ್ಷರಶಃ ತತ್ತರಿಸುತ್ತಿದೆ. ಭಾಗಶಃ ತಗ್ಗು ಪ್ರದೇಶಗಳು ಮುಳುಗಡೆ ಆಗಿವೆ. ಇದರ ಪರಿಣಾಮ ಅನೇಕ ಪ್ರದೇಶಗಳಲ್ಲಿ ಜನರು ಪರದಾಡುವಂತಾಗಿದೆ.
ನಿನ್ನೆ ರಾತ್ರಿ ಸುರಿದ ಮತ್ತು ಇಂದು ಸಂಜೆಯ ಮಳೆ ಬೆಂಗಳೂರಿಗರನ್ನು ಹಿಂಡಿ ಹಿಪ್ಪೆ ಮಾಡಿದೆ. ಸತತವಾಗಿ ಸರಿಯುತ್ತಿರುವ ಮಳೆ ಬರೋಬ್ಬರಿ 131.6 ಮಿಲಿ ಮೀಟರ್ ಗಿಂತ ಹೆಚ್ಚಿನ ಮಳೆಯಾಗಿದ್ದು, ರಾಜಧಾನಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಭಾಗ ಸೇರಿದಂತೆ ಎಲ್ಲ ಕಡೆ ವರುಣ ಅಬ್ಬರಿಸಿದ್ದಾನೆ. ಪರಿಣಾಮ ಮನೆ ಒಳಕ್ಕೆ ಮಳೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ನೀರು ನುಗ್ಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಸಂಕಷ್ಟಪಡುವಂತಾಗಿದೆ. ಪ್ರಮುಖವಾಗಿ ಮೆಜೆಸ್ಟಿಕ್, ಕೆ. ಆರ್ ಮಾರ್ಕೆಟ್, ವಿಧಾನಸೌಧ, ಕೆ ಆರ್ ಸರ್ಕಲ್, ಶಾಂತಿನಗರ, ಮಹಾಲಕ್ಷ್ಮಿ ಲೇಔಟ್, ಬ್ರಿಗೇಡ್ ರೋಡ್ , ಹಲಸೂರು ರಸ್ತೆ, ಬನಶಂಕರಿ ಸೇರಿದಂತೆ ಬಹುತೇಕ ರಸ್ತೆಗಳು ಜಲಾವೃತವಾಗಿವೆ.
ರಸ್ತೆಗಳು ಸಂಪೂರ್ಣ ಜಲಾವೃತ: ಸರ್ಜಾಪುರ ರಸ್ತೆಯ ರೈನ್ಬೋ ಲೇಔಟ್ ಸಂಪೂರ್ಣ ರಸ್ತೆಗಳು ಜಲಾವೃತವಾಗಿದೆ. ವಿಪ್ರೋ ಕಂಪನಿ ರಸ್ತೆಯೂ ನೀರಿನಿಂದ ತುಂಬಿದೆ. ಕಳೆದ ಹತ್ತು ದಿನಗಳಿಂದ ರೈಂಬೋ ಲೇಔಟ್ ಜನರ ಗೋಳಾಟ ಮುಂದುವರೆದಿದೆ.
ಕೆರೆಯಾದ ಎಕೋ ಸ್ಪೇಸ್: ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಮಳೆಗೆ ಎಲ್ಲಿ ನೋಡಿದರೂ ನೀರು ಕಾಣಿಸಿಕೊಳ್ಳುತ್ತಿದೆ. ಹಾಗೆಯೇ ಬೆಳ್ಳಂದೂರು ಬಳಿಯ ಎಕೋ ಸ್ಪೇಸ್ ಬಳಿಯಲ್ಲಿ ಆಟೋ ಸಂಪೂರ್ಣ ಮುಳುಗಡೆ ಆಗಿದೆ. ಜತೆಗೆ ಬಹುತೇಕರು ತಮ್ಮ ವಾಹನಗಳನ್ನು ನಿಂತಲ್ಲೆ ಬಿಟ್ಟು ಹೋಗಿದ್ದಾರೆ. ವಿಂಗರ್ ಟಾಟಾಯೆಸ್ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಎರಡು ವಾಹನ ಜಖಂ ಆಗಿದೆ. ಅದೇ ರೀತಿಯಲ್ಲಿ ಮಹಾಲಕ್ಷ್ಮೀ ಲೇಔಟ್ ಸೋಮೇಶ್ವರ ನಗರದ ತರಕಾರಿ ಮಾರ್ಕೆಟ್ ಬಳಿ ಮರ ಬಿದ್ದಿದೆ.
ರಿಚ್ಮಂಡ್ ರಸ್ತೆಯಲ್ಲಿ ನೀರು: ಸತತವಾಗಿ ಸುರಿಯುತ್ತಿರುವ ಮಳೆಯಿಂದ ರಿಚ್ಮಂಡ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿದೆ. ಅದು ಅಲ್ಲದೇ, ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಾಣವಾಗಿರುವ ರಸ್ತೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಬೆಂಗಳೂರು ಮಾತ್ರವಲ್ಲದೇ ಕಳೆದ ರಾತ್ರಿ ಮತ್ತು ಇಂದು ಸುರಿದ ಭಾರೀ ಮಳೆಗೆ ನೆಲಮಂಗಲದ ಮುಕ್ತನಾತೇಶ್ವರ ದೇವಾಲಯದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಮಾನಿಕೆರೆ ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಂ ಜಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ ಹಾಗೂ ಜನಪ್ರಿಯ ಅಪಾರ್ಟ್‍ಮೆಂಟ್ ರಸ್ತೆ ಕೂಡ ಜಲಾವೃತಗೊಂಡಿದೆ.