ಬೆಂಗಳೂರು:ಸೋಮವಾರ ಸಂಜೆಯಿಂದ ಇಡೀ ರಾತ್ರಿ ಸುರಿದ ಮಳೆಗೆ ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳು ಸೇರಿದಂತೆ ಹೊರ ವಲಯಗಳಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜಾಗರಣೆ ಮಾಡುವಂತಾಗಿತ್ತು.
ಪ್ರಮುಖ ರಸ್ತೆಗಳೆಲ್ಲವೂ ನೀರುಮಯವಾಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಕಿಮೀಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸೋಮವಾರ ಸಂಜೆ 5 ಗಂಟೆಗೆ ಆರಂಭವಾದ ಮಳೆ ರಾತ್ರಿ 10 ಗಂಟೆವರೆಗೂ ಅಬ್ಬರಿಸಿತು. ನಂತರ ರಾತ್ರಿ ಪೂರ್ತಿ ಜಿಟಿ ಜಿಟಿ ಮಳೆಯು ಮುಂದುವರೆಯಿತು. ವರುಣನ ಅಬ್ಬರಕ್ಕೆ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಕೆಲವೆಡೆ ಮರಗಳೂ ಧರೆಗುರುಳಿ ಬಿದ್ದವು.
ರಾಜಧಾನಿಯಲ್ಲಿ ಹೆಚ್ಚು ಮಳೆ ಸುರಿದ ಪ್ರದೇಶಗಳು:ಬೊಮ್ಮನಹಳ್ಳಿಯಲ್ಲಿ 30 ಮಿ.ಮೀ, ಬಿಟಿಎಂ ಲೇಔಟ್ 30 ಮಿ.ಮೀ, ಕೋಣನಕುಂಟೆ 27 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 28 ಮಿ.ಮೀ, ಅಟ್ಟೂರು 27 ಮಿ.ಮೀ, ಯಲಹಂಕ 25 ಮಿ.ಮೀ, ಹೊರಮಾವು 40 ಮಿ.ಮೀ, ಬಾಗಲಗುಂಟೆ 43 ಮಿ.ಮೀ, ದೊಡ್ಡಬಿದರಕಲ್ಲು 42 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 54 ಮಿ.ಮೀ, ಕೆಂಗೇರಿ 65 ಮಿ.ಮೀ, ನಾಗಪುರ 50 ಮಿ.ಮೀ, ಕೊಟ್ಟಿಗೆಪಾಳ್ಯ 48 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 25 ಮಿ.ಮೀ, ವಿ.ವಿ.ಪುರಂ 20 ಮಿ.ಮೀ, ಆರ್.ಆರ್.ನಗರ 35 ಮಿ.ಮೀ, ಉತ್ತರಹಳ್ಳಿ 27 ಮಿ.ಮೀ, ಹೆಚ್.ಗೊಲ್ಲಹಳ್ಳಿ 62 ಮಿ.ಮೀ, ಹೊರಮಾವು 38 ಮಿ.ಮೀ ಮಳೆಯಾಗಿದೆ.
ಇನ್ನೂ ಮೂರು ದಿನ ಮಳೆ: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಕೆಲವು ಕಡೆ ಸಾಧಾರಣ ಮಳೆಯಾಗುತ್ತಿದ್ದು, ಕೆಲ ಕಡೆ ಜೋರು ಮಳೆಯಾಗಿದೆ. ಇನ್ನೂ ಮೂರು ದಿನ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.