ಬೆಂಗಳೂರು:ನಗರದಲ್ಲಿ ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿಯಿತು. ಹಲವು ಭಾಗಗಳಲ್ಲಿ ರಾತ್ರಿ 8 ರಿಂದ 9 ಗಂಟೆಯವರೆಗೆ ನಿರಂತರವಾಗಿ ಜೋರು ಮಳೆ ಸುರಿದಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಮೋಡ ಕವಿದ ವಾತಾವರಣದೊಂದಿಗೆ ಹಲವೆಡೆ ತುಂತುರು ಮಳೆ ಆರಂಭಗೊಂಡಿತ್ತು. ಆದರೆ ರಾತ್ರಿ 8 ಗಂಟೆಗೆ ಜೋರಾಗಿ ಆರಂಭಗೊಂಡ ಮಳೆ 9 ಗಂಟೆಯವರೆಗೆ ಸತತವಾಗಿ ಸುರಿಯಿತು.
ಮಳೆಯಿಂದ ಮಲ್ಲೇಶ್ವರಂ, ಎಂ.ಜಿ.ರಸ್ತೆ, ಸದಾಶಿವನಗರ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ಪ್ಯಾಲೆಸ್ ರೋಡ್, ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಯಶವಂತಪುರ ಜಂಕ್ಷನ್, ಗೊರಗುಂಟೆಪಾಳ್ಯ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತ್ತು. ಅಂಡರ್ ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ನಗರದ ಶಿವಾಜಿನಗರ, ಆರ್.ಆರ್. ನಗರ, ಕೆ.ಆರ್.ವೃತ್ತ, ವಿಧಾನಸೌಧ, ನಂದಿನಿ ಲೇಔಟ್, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ನಾಗರಬಾವಿ, ಕೋರಮಂಗಲ, ಲಕ್ಕಸಂದ್ರ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ.