ಬೆಂಗಳೂರು: ಬೆಂಗಳೂರಲ್ಲಿ ಭಾರಿ ಮಳೆ ಆಗಿದೆ. 51 ವರ್ಷಗಳಲ್ಲಿ ದಾಖಲೆಯ ಮಳೆ ಸುರಿದಿದೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ನಿನ್ನೆಯೂ ಧಾರಾಕಾರ ಮಳೆ ಸುರಿದಿದೆ. ಬೊಮ್ಮನಹಳ್ಳಿ, ಬೆಂಗಳೂರು ಈಸ್ಟ್ ವಲಯದಲ್ಲಿ ಹೆಚ್ಚಿನ ಮಳೆ ಬಿದ್ದಿದೆ. ಒಟ್ಟಾರೆ ಈ ಬಾರಿಯ ಮಳೆಗಾಲದಲ್ಲಿ ಜೂನ್ನಿಂದ ಇಲ್ಲಿಯವರೆಗೆ 709 ಎಂ.ಎಂ ಮಳೆಯಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಎರಡುವರೆ ಪಟ್ಟು ಹೆಚ್ಚು ಮಳೆ ಸುರಿದಿದೆ. ಈ ಹಿಂದೆ 1998ರಲ್ಲಿ 725 ಎಂ.ಎಂ ಮಳೆಯಾಗಿತ್ತು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ಬೆಂಗಳೂರಲ್ಲಿ ವರುಣನ ಆರ್ಭಟ: ಭಾನುವಾರ ನಗರದಲ್ಲಿ ಸುರಿದ ಭಾರಿ ಮಳೆಯ ಅವಾಂತರಗಳ ಕುರಿತು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 2017ರಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ 846 ಎಂಎಂ ಮಳೆಯಾಗಿತ್ತು. ಈ ವರ್ಷ 703 ಎಂಎಂ ಮಳೆಯಾಗಿದೆ. 2017ರ ಆಗಸ್ಟ್, ಸೆಪ್ಟಂಬರ್ನಲ್ಲಿ ಸುರಿದ ಮಳೆ ಇದುವರೆಗಿನ ಅತಿ ಹೆಚ್ಚು ಮಳೆಯ ದಾಖಲೆಯಾಗಿದೆ. ಈ ಬಾರಿಯ ಎರಡನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ಕೆಲ ವಲಯಗಳಲ್ಲಿ 4 ಪಟ್ಟು ಹೆಚ್ಚು ಮಳೆ:ಕಳೆದ ಕೆಲ ವರ್ಷಗಳಿಗೆ ಹೋಲಿಸಿದ್ರೆ ಆಗಸ್ಟ್ ತಿಂಗಳಲ್ಲಿ ಈ ಬಾರಿ ಕೆಲ ವಲಯಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದೆ. ಮಹದೇವಪುರ ವಲಯದ 28 ಕಡೆಗಳಲ್ಲಿ ಮಳೆ ನೀರು ನುಗ್ಗಿದೆ. ಬೊಮ್ಮನಹಳ್ಳಿಯಲ್ಲಿ 9 ಕಡೆ, ಈಸ್ಟ್ ಜೋನ್ನಲ್ಲಿ 24 ಕಡೆ ಮಳೆ ನೀರು ನುಗ್ಗಿದೆ. ಕೇಂದ್ರ ಭಾಗದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಎತ್ತರದಲ್ಲಿ ಇರುವುದರಿಂದ ಮಳೆ ನೀರು ನಿಂತಿಲ್ಲ. ದೊಮ್ಮಲೂರು ಭಾಗದಲ್ಲಿ ಮಳೆ ನೀರಿನ ತೊಂದರೆ ಇದೆ. ಸೌತ್, ವೆಸ್ಟ್, ಆರ್ ಆರ್ ನಗರ ವಲಯಗಳಲ್ಲಿ ಹೆಚ್ಚಿನ ತೊಂದರೆಯಾಗಿಲ್ಲ. ಈಜಿಪುರದಲ್ಲಿ 16, ಕೋರಮಂಗಲದಲ್ಲಿ 26 ಕಡೆ ಮನೆಯೊಳಗೆ ನೀರು ನುಗ್ಗಿರುವ ದೂರುಗಳು ಬಂದಿವೆ. ಹೆಚ್ಎಎಲ್ ಬಳಿ ಅಪಾರ್ಟ್ಮೆಂಟ್ ಒಳಗೆ ಮಳೆ ನೀರು ನುಗ್ಗಿದೆ ಎಂದು ಮಾಹಿತಿ ನೀಡಿದರು.
43 ಪಂಪ್ ಬಳಕೆ:ಒಟ್ಟು ಪಾಲಿಕೆ ಬಳಿಯಿರುವ 63 ಪಂಪ್ಗಳಲ್ಲಿ 43 ಪಂಪ್ ಬಳಕೆಯಾಗುತ್ತಿದೆ. ಎನ್ಡಿಆರ್ಎಫ್ ಸಹಾಯ, ಬೋಟ್ ಬಳಕೆ ಮಾಡಲಾಗುತ್ತಿದೆ. ಸದ್ಯ ಔಟರ್ ರಿಂಗ್ ರೋಡ್ನಲ್ಲಿ ಎರಡು ಅಡಿ ನೀರು ಹರಿಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಕೆರೆಗಳು ಫುಲ್:ಬೆಳ್ಳಂದೂರು, ವಿಭೂತಿಪುರ, ಬೇಗೂರು ಕೆರೆ ತುಂಬಿದೆ. ಸಾವಳಕೆರೆ ನೀರು ಇಕೊ ಸ್ಪೇಸ್ ಬೆಳ್ಳಂದೂರು ರಸ್ತೆಗೆ ಹರಿದು ಬರುತ್ತಿದೆ. ಈಗಲೂ ಎರಡು ಮೂರು ಅಡಿ ಮಳೆ ನೀರು ರಸ್ತೆಯ ಮೇಲೆ ನಿಂತಿದೆ.