ಬೆಂಗಳೂರು :ರಾಜ್ಯದಲ್ಲಿ ಈ ವಾರ ಪೂರ್ತಿ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ. ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ಮಾನ್ಸೂನ್ ಚುರುಕಾಗಿದೆ. ಉತ್ತರ ಒಳನಾಡಿನಲ್ಲಿಯೂ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲೂ ಮಳೆಯಾಗಿದೆ.
ಪೂರ್ವ ಅರಬ್ಬಿ ಸಮುದ್ರದ ಕರ್ನಾಟಕದ ಕರಾವಳಿಯಲ್ಲಿ ದಟ್ಟ ಮೋಡ ಇದೆ. ಇದರ ಪ್ರಭಾವದಿಂದ ಜೂನ್ 15 ರಿಂದ 19ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಜೂನ್ 15, 16ರಂದು ಭಾರಿ ಮಳೆ ನಿರೀಕ್ಷಿಸಿರುವುದರಿಂದ ಜೂನ್ 15-16ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 17 ರಿಂದ 19ರವರೆಗೆ ಎಲ್ಲೋ ಅಲರ್ಟ್ ಕೊಡಲಾಗಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜೂನ್ 15 ರಿಂದ 19ರವರೆಗೂ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕಡೆ ಭಾರಿ ಹಾಗೂ ಅತಿ ಅಬ್ಬರದ ಮಳೆ ನಿರೀಕ್ಷಿಸಿರುವುದರಿಂದ ಜೂನ್ 15ರಂದು ಆರೆಂಜ್ ಅಲರ್ಟ್ ಹಾಗೂ ಜೂನ್ 16,17ರಂದು ಎಲ್ಲೋ ಅಲರ್ಟ್ ಕೊಡಲಾಗಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಿಗೆ ಜೂನ್ 15 ರಿಂದ 17ರವರೆಗೆ ಭಾರೀ ಮಳೆ ನಿರೀಕ್ಷೆ ಇದ್ದು, ಎಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿಯೂ ಮುಂದಿನ ಎರಡು ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇಡೀ ರಾಜ್ಯದಲ್ಲಿ ಜೂನ್ 17ರಿಂದ ತಾತ್ಕಾಲಿಕವಾಗಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.