ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ನಾಲ್ಕೈದು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕರಾದ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ಇಂದಿನಿಂದ ಜೂನ್ 14 ರವರೆಗೆ ಭಾರೀ ಮಳೆಯಾಗಲಿದ್ದು, ಬಂಗಾಳಕೊಲ್ಲಿ ಉಪಸಾಗರದ ಪೂರ್ವ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಮತ್ತಷ್ಟು ತೀವ್ರಗೊಂಡು ವಾಯುವ್ಯ ದಿಕ್ಕಿನಲ್ಲಿ ಚಲಿಸಬಹುದು ಎಂದರು.
ಇದರ ಪರಿಣಾಮ ಮುಂದಿನ ನಾಲ್ಕೈದು ದಿನ ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿಸಿದರು.
ಹವಾಮಾನ ಇಲಾಖೆ ನಿರ್ದೇಶಕರಾದ ಸಿ.ಎಸ್. ಪಾಟೀಲ್ ಮಾಹಿತಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಮಳೆಯಾಗಲಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ ,ಕೊಡಗು, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ಗುಲ್ಬರ್ಗ, ಬೀದರ್ ಹಾಗೂ ಯಾದಗಿರಿಯಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದರು.
ನೈರುತ್ಯ ಮುಂಗಾರು ತುಮಕೂರಿನವರೆಗೆ ತಲುಪಿದೆ. ಎಲ್ಲಾ ಕರಾವಳಿ ಜಿಲ್ಲೆಯಲ್ಲಿ, ಮಲೆನಾಡು ಜಿಲ್ಲೆಗಳಿಗೂ ಮುಂಗಾರು ಪ್ರವೇಶವಾಗಿದ್ದು, ಮುಂದಿನ ಎರಡ್ಮೂರು ದಿನಗಳಲ್ಲಿ ಕರ್ನಾಟಕದಾದ್ಯಂತ ಮುಂಗಾರು ಪ್ರವೇಶ ಆಗಲಿದೆ ಎಂದರು. ಹಾಗೂ ಈ ವಾರದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದರು.