ಬೆಂಗಳೂರಿನಲ್ಲಿಂದು ವರುಣನ ಆರ್ಭಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮೊದಲೇ ವರ್ಷಧಾರೆಯಾಗುತ್ತಿದ್ದು ಇಂದು ಮಧ್ಯಾಹ್ನ ಕೆಲ ಕಾಲ ನಗರದ ಹಲವೆಡೆ ಮಳೆಯಾಯಿತು. ಏಕಾಏಕಿ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು. ಕೆಲವೆಡೆ ಮರಗಳು ಧರೆಗುರುಳಿದ ಮಾಹಿತಿ ಲಭ್ಯವಾಗಿದ್ದು, ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ. ಶಾಂತಿನಗರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ ಸೇರಿದಂತೆ ನಗರದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು ರಾತ್ರಿಯೂ ಮುಂದುವರೆಯುವ ಮುನ್ಸೂಚನೆಯಿದೆ.
ಬೆಂಗಳೂರಿನಲ್ಲಿಂದು ವರುಣನ ಆರ್ಭಟ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ರಾಜ್ಯದ ಕೆಲವು ಕಡೆ ಭಾರೀ ಮಳೆಯಾಗಲಿದೆ. ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ ನೀಡದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಮಧ್ಯಾಹ್ನ ಭಾರಿ ಮಳೆಯಾಯಿತು. ಮೆಜೆಸ್ಟಿಕ್, ಮಲ್ಲೇಶ್ವರ, ಜಯನಗರ, ಬಸವನಗುಡಿ, ವಿಜಯನಗರ, ದೀಪಾಂಜಲಿನಗರ, ಹೊಸಹಳ್ಳಿ, ಅತ್ತಿಗುಪ್ಪೆ ಸುತ್ತಮುತ್ತ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ಮಳೆ ಹಿನ್ನೆಲೆಯಲ್ಲಿ ಪ್ರಯಾಣಿಕರು, ವಾಹನ ಸಾವರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಅಲ್ಲಲ್ಲಿ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪ್ರಯಾಸಪಡಬೇಕಾಯಿತು.
ಮುಂಜಾಗ್ರತಾ ಕ್ರಮವಾಗಿ ಕೆ.ಆರ್, ಸರ್ಕಲ್ ಅಂಡರ್ ಪಾಸ್ನಲ್ಲಿ ಸಂಚಾರ ನಿರ್ಬಂಧಿಸಿ ಪೋಲಿಸರು ಬ್ಯಾರಿಕೇಡ್ ಹಾಕಿದ್ದರು, ಇತ್ತೀಚೆಗೆ ಇದೇ ಅಂಡರ್ ಪಾಸ್ನಲ್ಲಿ ಮಳೆನೀರು ಕಾರಿನಲ್ಲಿ ನುಗ್ಗಿ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಅಂಡರ್ ಪಾಸ್ ಕ್ಲೋಸ್ ಮಾಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ಸಣ್ಣಗೆ ಮಳೆಯ ಸಿಂಚನವಾಗುತ್ತಿದೆ. ಆದರೆ ಇಂದು ನಗರದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ತುಸು ಹೆಚ್ಚು ಮಳೆರಾಯ ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಕೆಲವು ಕಡೆ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದ ಪ್ರಸಂಗ ಉಂಟಾಗಿದೆ.
ಇನ್ನೆರಡು ದಿನ ಮಳೆ ಸಾಧ್ಯತೆ: ಮುಂಗಾರು ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇಂದು ಮತ್ತು ನಾಳೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ
ಕೊಡಗಿನಲ್ಲೂ ಆರ್ಭಟಿಸಿದ ವರುಣ:ಮತ್ತೊಂದೆಡೆಕೊಡಗಿನ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಸೋಮವಾರ ಸಂಜೆ ಕೇವಲ ಅರ್ಧ ಗಂಟೆ ಸುರಿದ ಧಾರಾಕಾರ ಮಳೆಯಿಂದಾಗಿ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದ್ದರಿಂದ ಚೆಟ್ಟಳ್ಳಿ, ಅಭ್ಯತ್ ಮಂಗಲ ಸೇರಿದಂತೆ ಕೆಲ ಗ್ರಾಮಗಳ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಮುಂದಿನ ನಾಲ್ಕು ದಿನಗಳ ಕಾಲ ಕೊಡಗಿನಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 1ರವರೆಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ:ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗ ಪೂರ್ವ ಮುಂಗಾರು ಗುಡುಗು, ಸಿಡಿಲಿನ ಸಮೇತ ಅಬ್ಬರಿಸುತ್ತಿದೆ. ಜೂನ್ 1ರ ವರೆಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವ ಮುಂಗಾರಿನ ಪರಿಣಾಮ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ.
ಈ ಹಿನ್ನಲೆಯಲ್ಲಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 1ರ ತನಕ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಾತ್ರ ಗಾಳಿಯೊಂದಿಗೆ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಆದ್ದರಿಂದ ಜನರು ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದೆ.
ಇದನ್ನೂ ಓದಿ:ಶಿವಮೊಗ್ಗ: ಸಿಡಿಲು ಬಡಿದು ಮಹಿಳೆ ಸಾವು... ತೆಂಗಿನ ಮರ ಬಿದ್ದು ಎರಡು ಕಾರು ಜಖಂ