ಬೆಂಗಳೂರು :ಮುಂದಿನ ಮೂರು ದಿನ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಳೆ ಸುರಿಯುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂನ್ 7ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಕಲಬುರಗಿಯಲ್ಲಿ ಅತಿ ಹೆಚ್ಚು ಉಷ್ಣಾಂಶ:ಗರಿಷ್ಠ ಉಷ್ಣಾಂಶವು ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಶನಿವಾರ ಕಲಬುರಗಿಯಲ್ಲಿ ಅತ್ಯಂತ ಗರಿಷ್ಠ 42.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿ ಬಿರುಗಾಳಿ:ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹವಾಮಾನದಲ್ಲಿ ಇನ್ನಷ್ಟು ವೈಪರೀತ್ಯಗಳು ಕಂಡುಬಂದರೆ ಇನ್ನೂ ಕೆಲವು ದಿನಗಳ ಕಾಲ ನೈರುತ್ಯ ಮುಂಗಾರು ಮಾರುತದ ಆಗಮನ ವಿಳಂಬವಾಗಬಹುದು ಎಂದು ಇಲಾಖೆ ಅಂದಾಜಿಸಿದೆ.
ನಾಲ್ಕು ದಿನ ನೈರುತ್ಯ ಮುಂಗಾರು ವಿಳಂಬ:ವಾಡಿಕೆಯಂತೆ ನೈರುತ್ಯ ಮುಂಗಾರು ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ. ಇದಾದ ಕೆಲವೇ ದಿನಗಳಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತದೆ. ಆದರೆ ಈ ಬಾರಿ ನಾಲ್ಕು ದಿನಗಳ ಕಾಲ ತಡವಾಗಬಹುದು. ಕಳೆದ ವರ್ಷ ಮೇ 29ರಂದು ಮುಂಗಾರು ಆರಂಭವಾಗಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.
ನೀರಿಗಾಗಿ ಹಾಹಾಕಾರ:ಈಗಾಗಲೇ ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ಮಲೆನಾಡು ಭಾಗದಲ್ಲಿಯೂ ಸಹ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಬಾರಿ ಇದುವರೆಗೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಪೂರ್ವ ಮಳೆಯಾಗದೇ ಇರುವುದರಿಂದ ಜಲ ಮೂಲಗಳು ಬತ್ತಿಹೋಗಿವೆ. ಉತ್ತರ ಕರ್ನಾಟಕವಲ್ಲದೇ ಮಲೆನಾಡು ಭಾಗದಲ್ಲಿಯೂ ಸಹ ನೀರಿನ ಮೂಲಗಳಾದ ಬಾವಿ, ಕೆರೆಗಳು ಖಾಲಿಯಾಗುತ್ತಿದ್ದು, ಜನರು ಕುಡಿಯುವ ನೀರಿಗೂ ಸಹ ಪರದಾಡುವಂತಾಗಿದೆ. ಪ್ರತಿ ವರ್ಷ ಈ ವೇಳೆಗಾಗಲೇ ಹಲವು ಬಾರಿ ಮಳೆಯಾಗುವುದರಿಂದ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರಲಿಲ್ಲ. ಆದರೆ ಈ ಸಲ ಮಳೆರಾಯನ ಆಗಮನವೇ ದೂರವಾಗಿರುವುದರಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ಮಹಾ ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ:ಮಳೆಯಿಲ್ಲದೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಿನ ತೀವ್ರ ಅಗತ್ಯತೆ ಎದುರಾಗಿದ್ದು, ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆಗೆ ಆಗ್ರಹಿಸಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಿನ ಸಿಎಂ ಏಕನಾಥ ಶಿಂಧೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತೀವ್ರ ಅಭಾವ ಇರುವುದರಿಂದ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಒಟ್ಟಾರೆ 5 ಟಿಎಂಸಿ ನೀರು ಬಿಡುಗಡೆಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಇದನ್ನೂ ಓದಿ :ಸಾರ್ವಜನಿಕರ ಕುಂದುಕೊರತೆ ಆಲಿಸಲು ಮಂಗಳೂರಿನಲ್ಲಿ ಮತ್ತೆ ' ಫೋನ್ ಇನ್ ' ಕಾರ್ಯಕ್ರಮ