ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ ಬೆಂಗಳೂರು:ರಾಜಧಾನಿಯಲ್ಲಿಸೋಮವಾರ ಸಂಜೆಯಿಂದ ರಾತ್ರಿ ಪೂರ್ತಿ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮುಖ್ಯ ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಂಚಾರ ದಟ್ಟಣೆ ಉಂಟಾಯಿತು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಸಮಸ್ಯೆ ಸೃಷ್ಟಿಸಿದೆ. ರಾಜಕಾಲುವೆಗಳಲ್ಲಿ ನೀರು ತುಂಬಿ ರಸ್ತೆಗೆ ಬಂದು ಕೆರೆಯಂತಾಗಿದ್ದರಿಂದ ಜನರು ಭಾರೀ ಸಮಸ್ಯೆ ಎದುರಿಸುವಂತಾಗಿತ್ತು.
ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ಮಳೆಯ ನೀರಿಗೆ ರಸ್ತೆ ಸಂಪೂರ್ಣ ಮುಳುಗಿ ಬಿಟ್ಟಿತ್ತು. ಸುಮಾರು 50 ಮೀಟರ್ ಉದ್ದ ರಸ್ತೆಯಲ್ಲಿ ರಾಜಕಾಲುವೆ ನೀರು ತುಂಬಿ ಹರಿದು ಅವಾಂತರ ಸೃಷ್ಟಿಸಿತ್ತು. 15ಕ್ಕೂ ಅಧಿಕ ವಾಹನದಲ್ಲಿದ್ದ 50ಕ್ಕೂ ಹೆಚ್ಚು ಮಂದಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ನೀರಿನಲ್ಲಿ ಸಿಲುಕಿದ್ದ 50ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
ಇನ್ನೊಂದೆಡೆ ಪೀಣ್ಯದ 8ನೇ ಮೈಲಿ ಸಿಗ್ನಲ್ ಬಳಿ ಮಳೆ ನೀರಲ್ಲೇ ವ್ಯಕ್ತಿಯೊಬ್ಬರು ಮಲಗಿದ್ದು ಕಂಡುಬಂತು. ಕುಡಿದ ಮತ್ತಿನಲ್ಲಿ ಮಲಗಿದ್ದ ಎನ್ನಲಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಎಬ್ಬಿಸಿ ಕಳುಹಿಸಿದ್ದಾರೆ.
ಇದನ್ನೂ ಓದಿ:ದಸರಾ ಜಂಬೂ ಸವಾರಿ ತಾಲೀಮು: ಮಳೆ ನಡುವೆಯೂ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು
ಇನ್ನೂ 4 ದಿನ ಮಳೆ ಮುನ್ಸೂಚನೆ: ನಗರದಲ್ಲಿ ಕಳೆದೆರಡು ದಿನಗಳಿಂದ ಗುಡುಗು ಸಹಿತ ಮಳೆ ಸುರಿದಿದೆ. ಶಿವಾಜಿನಗರ, ವಸಂತನಗರ, ಶಾಂತಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಬಹುತೇಕ ಕಡೆ ಉತ್ತಮ ಮಳೆ ಆಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ವಾರ ಉಷ್ಣಾಂಶ ಹೆಚ್ಚಳವಾಗಿ ರಾಜಧಾನಿಯಲ್ಲಿ ಸೆಖೆಯ ವಾತಾವರಣವಿತ್ತು. ಆದರೆ ಆದಿತ್ಯವಾರ ಸಂಜೆ ಕೂಡ ಮಳೆಯಾಗಿ ವಾತಾವರಣ ತಂಪಾಗಿತ್ತು. ಸೋಮವಾರ ಮುಂಜಾನೆಯಿಂದ ಮಳೆ ಸುರಿಯಿತು. ನಂತರ ಇಡೀ ದಿನ ಮೋಡದ ವಾತಾವರಣವಿದ್ದರೂ ಬಿಸಿಲು ಕೂಡ ಬಿದ್ದಿತ್ತು. ಸಂಜೆ 4 ಗಂಟೆಯ ನಂತರ ನಗರದ ಕೆಲವೆಡೆ ಆರಂಭವಾದ ನಂತರ ಎಲ್ಲೆಡೆ ಸುರಿಯಿತು. ರಸ್ತೆಯಲ್ಲೆಲ್ಲಾ ನೀರು ತುಂಬಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಮುಂದಿನ ದಿನಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಜೊತೆಗೆ, ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಸಾಲು ಸಾಲು ರಜೆ, ಕಡಿಮೆಯಾದ ಮಳೆ: ಪ್ರವಾಸಿಗರ ನಡೆ ಕಾರವಾರದ ಕಡಲತೀರಗಳ ಕಡೆ